×
Ad

ಕೃಷಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ಆರೋಪ: ಚರ್ಚೆಗೆ ಗ್ರಾಸವಾದ ರಾಜ್ಯಪಾಲ ಕಚೇರಿಯ ಪತ್ರ

Update: 2023-08-07 16:52 IST

ಚಲುವರಾಯಸ್ವಾಮಿ- ಕೃಷಿ ಸಚಿವರು | ಹರಿದಾಡುತ್ತಿರುವ ಪತ್ರ

ಬೆಂಗಳೂರು, ಆ.7: ಕೃಷಿ ಇಲಾಖೆಯಲ್ಲಿನ ಸಹಾಯಕ ಕೃಷಿ ನಿರ್ದೇಶಕ ವರ್ಗಾವಣೆಗೆ ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಬೇಡಿಕೆಯಿಟ್ಟಿದ್ದಾರೆ ಎನ್ನುವ ದೂರಿನ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಚರ್ಚೆಗೆ ಗ್ರಾಸವಾಗಿದೆ.

ಮಂಡ್ಯ ಜಿಲ್ಲಾ ವ್ಯಾಪ್ತಿಯ ಸಹಾಯಕ ಕೃಷಿ ನಿರ್ದೇಶಕರು, ಸಿಬ್ಬಂದಿ ಹರೆಸರಿನಲ್ಲಿ ದೂರು ಸಲ್ಲಿಸಿದ್ದು, ಇದರಲ್ಲಿ ಅಧಿಕಾರಿ, ಸಿಬ್ಬಂದಿ ವರ್ಗಾವಣೆಗೆ ಲಕ್ಷಾಂತರ ರೂಪಾಯಿ ನೀಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕುಟುಂಬ ಸದಸ್ಯರೊಂದಿಗೆ ವಿಷ ಕುಡಿಯವುದಾಗಿ ಉಲ್ಲೇಖಿಸಿದ್ದಾರೆ.ಹೀಗಾಗಿ, ದೂರನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸತ್ಯಕ್ಕೆ ದೂರ, ತನಿಖೆಗೆ ಆಗ್ರಹ:

ಕೃಷಿ ಇಲಾಖೆಯಲ್ಲಿ ಲಂಚ ಪ್ರಕರಣದ ಬಗ್ಗೆ ನನ್ನ ವಿರುದ್ಧ ರಾಜ್ಯಪಾಲರಿಗೆ ನೀಡಿರುವ ದೂರು ನಕಲಿ ವ್ಯಕ್ತಿಗಳು ಮಾಡಿರುವ ಯೋಜಿತ ಸಂಚು. ದೂರಿನ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಮೂಲಕ ತನಿಖೆ ಮಾಡಿ ವರದಿ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಒತ್ತಾಯಿಸಿದ್ದಾರೆ.

ಕೃಷಿ ಇಲಾಖೆಯಲ್ಲಿ ವರ್ಗಾವಣೆಗೆ ಲಂಚಕ್ಕೆ ಒತ್ತಾಯಿಸಲಾಗಿದೆ ಎಂದು ಕೆಲ ಮಾಧ್ಯಮದಲ್ಲಿ ಮರು ಪ್ರಸಾರವಾಗಿರುವ ವರದಿ ಸತ್ಯಕ್ಕೆ ದೂರವಾಗಿದೆ. ನಮ್ಮ ಸರಕಾರದ ಜನಪರ ಆಡಳಿತದ ಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಂತಹ ಪ್ರಯತ್ನ ಮಾಡುತ್ತಲೇ ಬಂದಿದ್ದು ಇದು ಹತಾಶಾ ಮನೋ ಭಾವವಾಗಿದೆ. ಈಗಾಗಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ. ರಾಜ್ಯಪಾಲರಿಗೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದೂರುಪತ್ರ ಸೃಷ್ಟಿ ಮಾಡಿ ಕಳಿಸಲಾಗಿದೆ ಎಂದರು.

"ಮುಖ್ಯಮಂತ್ರಿ ತನಿಖೆ ನಡೆಸಲಿ'

ಕೃಷಿ ಇಲಾಖೆಯಲ್ಲಿ ವರ್ಗಾವಣೆಗೆ ಲಂಚ ವಿಚಾರವಾಗಿ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಮೂಲಕ ತನಿಖೆ ಮಾಡಿ ವರದಿ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಒತ್ತಾಯಿಸುವೆ.ಜತೆಗೆ, ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗ ಪಡಿಸುವಂತೆಯೂ ಸಚಿವ ಚಲುವರಾಯಸ್ವಾಮಿ ಆಗ್ರಹಿಸಿದ್ದಾರೆ.

ತನಿಖೆ ನಡೆಸೋಣ: ಡಿಕೆಶಿ

ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳಿಂದ ರಾಜ್ಯಪಾಲರಿಗೆ ದೂರು ವಿಚಾರವಾಗಿ ತನಿಖೆ ನಡೆಸೋಣ. ಪಾಪ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.ಅದರಲ್ಲೂ ನಾವು ಮಂಡ್ಯದಲ್ಲಿ ಏಳಕ್ಕೆ ಆರು ಗೆದ್ದುಬಿಟ್ಟಿದ್ದೀವಲ್ಲ ಅದಕ್ಕಾಗಿ ಸಹಿಸಿಕೊಳ್ಳಲು ಆಗುತ್ತಿಲ್ಲ.

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News