×
Ad

ಕಾಂಗ್ರೆಸ್, ರಾಹುಲ್ ಗಾಂಧಿ ಮೇಲೆ ಇಂಡಿಯಾ ಒಕ್ಕೂಟದ ಮಿತ್ರರಿಗೆ ವಿಶ್ವಾಸವೇ ಇಲ್ಲ:‌ ಪ್ರಲ್ಹಾದ್ ಜೋಶಿ

Update: 2025-02-04 11:21 IST

ಹೊಸದಿಲ್ಲಿ: ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳೇ ಇಂದು ತನ್ನನ್ನು ಬೆಂಬಲಿಸದಂತಹ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಮೇಲೆ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳಿಗೆ ನಂಬಿಕೆಯೇ ಇಲ್ಲದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ‌ದ ಅವರು, ಸಮಾಜವಾದಿ ಪಾರ್ಟಿ ಇಂಡಿಯಾ ಒಕ್ಕೂಟದ ಅಂಗ ಪಕ್ಷವೇ ಆಗಿದ್ದರೂ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬದಲು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸುತ್ತಿದೆ. ಹೀಗೆ ಇಂಡಿಯಾ ಒಕ್ಕೂಟದ ಎಲ್ಲಾ ಮಿತ್ರಪಕ್ಷಗಳು ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಳ್ಳುತ್ತಿವೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುತ್ತೇನೆ, ರಾಹುಲ್ ಗಾಂಧಿ ಅವರನ್ನಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. ಅದೇ ರೀತಿ ಮಮತಾ ಬ್ಯಾನರ್ಜಿ, ಉಮರ್ ಅಬ್ದುಲ್ಲಾ ಯಾರೊಬ್ಬರೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅನ್ನು ಬೆಂಬಲಿಸಲು ಸಿದ್ಧರಿಲ್ಲ. ಅಂದರೆ ಕಾಂಗ್ರೆಸ್ ಅಷ್ಟರ ಮಟ್ಟಿಗೆ ವಿಶ್ವಾಸ ಕಳೆದುಕೊಂಡಿದೆ ಎಂದರು.

ಕಾಂಗ್ರೆಸ್ ಸೋಲೊಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಇಂಡಿಯಾ ಮೈತ್ರಿಕೂಟದ ಇತರ ಮಿತ್ರ ಪಕ್ಷಗಳು ಅದರಿಂದ ದೂರ ಸರಿಯುತ್ತಿವೆ. ಆದರೂ ಕಾಂಗ್ರೆಸ್ ಇನ್ನೂ ಸುಧಾರಿಸಿಕೊಳ್ಳಲು ಸಿದ್ಧವಾಗಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಸುಧಾರಣೆ ಕಾಣಬೇಕು ಎಂದು ಮಿತ್ರಪಕ್ಷಗಳೇ ಬುದ್ಧಿಮಾತು ಹೇಳುತ್ತಿವೆ. ರಾಹುಲ್ ಗಾಂಧಿ ವಾಸ್ತವ ಅರಿತುಕೊಳ್ಳಬೇಕು. ನಮ್ಮ ಮಾತು ಬೇಡ ಮಿತ್ರರ ಮಾತನ್ನದರೂ ಕೇಳಲಿ ಎಂದರು.

ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಜನರ ತೀರ್ಪನ್ನು ಗೌರವದ ಭಾವನೆಯಿಂದ ಸ್ವೀಕರಿಸಬೇಕು. ಅದು ಬಿಟ್ಟು ಇವಿಎಂ ಮೇಲೆ, ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸುತ್ತ ಲಘುವಾಗಿ ಮಾತನಾಡುವುದು ಸಲ್ಲದು. ಈಗ ಇವರಿಗೆ ಮತದಾರರ ಮೇಲೆ ಶಂಕೆ ಶುರುವಾಗಿದೆ. ಹಾಗಾಗಿ ರಾಹುಲ್ ಗಾಂಧಿ ಲಘು ಹೇಳಿಕೆ ನೀಡುತ್ತಿದ್ದಾರೆ. ನಾವು ಕರ್ನಾಟಕ ಮತ್ತು ಜಾರ್ಖಂಡ್ ಸೋಲನ್ನು ಒಪ್ಪಿಕೊಂಡಂತೆ ಕಾಂಗ್ರೆಸ್ ಇತರ ರಾಜ್ಯಗಳಲ್ಲಾದ ಸೋಲನ್ನು ಸ್ವೀಕರಿಸದೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಜೋಶಿ ಆಕ್ಷೇಪಿಸಿದರು.

  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News