ಖಾಸಗಿ, ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಕಾಯಿದೆ 1983 ಅನ್ವಯ: ಹೈಕೋರ್ಟ್
ಬೆಂಗಳೂರು, ನ.4: ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಹಾಗೂ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ನೌಕರರ ರಾಜೀನಾಮೆ ಮತ್ತು ಹಿಂಬಡ್ತಿ ವಿಚಾರದಲ್ಲಿ ಕರ್ನಾಟಕ ಶಿಕ್ಷಣ ಕಾಯಿದೆ 1983 ಅನ್ವಯವಾಗಲಿದೆ ಎಂದು ಹೈಕೋರ್ಟ್ ತಿಳಿಸಿದೆ.
ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್ 97 ರಾಜೀನಾಮೆ ನೀಡುವುದಕ್ಕೂ ಮುನ್ನ ಆಡಳಿತ ಮಂಡಳಿಗೆ ನೋಟಿಸ್ ನೀಡುವ ವಿಚಾರ ಮತ್ತು ನಿಗದಿತ ನಮೂನೆಯಲ್ಲಿ ರಾಜ್ಯ ಸರಕಾರದಲ್ಲಿ ಅಧಿಕಾರದಲ್ಲಿರುವ ಅಧಿಕಾರಿಯಿಂದ ದೃಢೀಕರಿಸುವ ವಿಚಾರವನ್ನು ತಿಳಿಸಲಿದೆ.
ಸೆಕ್ಷನ್ 98 ಹಿಂಬಡ್ತಿ ನೀಡುವುದಕ್ಕಾಗಿ ಸಕ್ಷಮ ಪ್ರಾಧಿಕಾರ ಮತ್ತು ಹಿರಿಯ ಅಧಿಕಾರಿಗಳ ಅನುಮತಿ ಪಡೆದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿದೆ. ರಾಜರಾಜೇಶ್ವರಿ ದಂತ ಕಾಲೇಜು ಮತ್ತು ಆಸ್ಪತ್ರೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ, ಕರ್ನಾಟಕ ಶಿಕ್ಷಣ ಕಾಯಿದೆಯ ಈ ಸೆಕ್ಷನ್‍ಗಳು ಕಾರ್ಮಿಕ ಕಾನೂನಿನಂತೆ ಸಾಮಾಜಿಕ ಭದ್ರತೆಯನ್ನು ಒದಗಿಸಲಿವೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?: ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎ.ಬಿ.ಮುರಗೋಡು ಅವರ ಮಗ ಡಾ.ಸಂಜಯ್ ಮುರಗೋಡು ಎಂಬುವರನ್ನು ಮೂಲ ವೇತನದಲ್ಲಿ ಶೇ.25ರಷ್ಟು ಮಂಜೂರು ಮಾಡಿ ಮರು ನೇಮಕ ಮಾಡಿಕೊಳ್ಳುವಂತೆ ಕಾರ್ಮಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜರಾಜೇಶ್ವರಿ ದಂತ ಕಾಲೇಜು ಮತ್ತು ಆಸ್ಪತ್ರೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ರಾಜರಾಜೇಶ್ವರಿ ದಂತ ಕಾಲೇಜಿನಲ್ಲಿ ರೋಗಶಾಸ್ತ್ರ ಮತ್ತು ಮೈಕ್ರೋಬಯಾಲಜಿ ವಿಭಾಗದ ಪೆÇ್ರೀಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ಮುರುಗೋಡು ಅವರಿಗೆ 2021ರ ಜೂನ್ 11ರಿಂದ 12 ತಿಂಗಳ ಅವಧಿಗೆ ಶೇ.25 ರಷ್ಟು ಮೂಲ ವೇತನ ಪಾವತಿ ಮಾಡುವ ಮೂಲಕ ವೃತ್ತಿಯಿಂದ ವಜಾಗೊಳಿಸುವುದಾಗಿ ನೋಟಿಸ್ ಜಾರಿ ಮಾಡಿತ್ತು. ಜೂನ್ 14ರಿಂದ 2021ರಿಂದ ಮೂರು ತಿಂಗಳಲ್ಲಿ ವಜಾಗೊಳಿಸುವುದಾಗಿ ನೋಟಿಸ್ ಜಾರಿ ಮಾಡಿದ್ದರು.
ಮೇಲ್ಮನವಿ ಕುರಿತ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಿದ್ದ ಕಾಲೇಜು ಪರ ವಕೀಲರು, ನಮ್ಮ ಕಕ್ಷಿದಾರರು ಖಾಸಗಿ ಅನುದಾನ ರಹಿತ ಹಾಗೂ ಭಾμÁ ಅಲ್ಪಸಂಖ್ಯಾತ ಸಂಸ್ಥೆಯಾಗಿದೆ. ಹೀಗಾಗಿ, ಕರ್ನಾಟಕ ಶಿಕ್ಷಣ ಕಾಯಿದೆ 1983 ಅನ್ವಯವಾಗುವುದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಅಲ್ಲದೆ, ಟಿಎಂಎ ಪೈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲೇಖಿಸಿದ್ದ ವಕೀಲರು, ದಂತ ಕಾಲೇಜುಗಳನ್ನು ದಂತ ವೈದ್ಯರ ಕಾಯಿದೆ ನಿರ್ವಹಣೆ ಮಾಡಲಿದೆ. ಹೀಗಾಗಿ ಅನುದಾನ ರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಮತ್ತು ಇತರೆ ಶಿಕ್ಷಣ ಸಂಸ್ಥೆಗಳನ್ನು ಕರ್ನಾಟಕ ಶಿಕ್ಷಣ ಕಾಯಿದೆ 1983ರ ಸೆಕ್ಷನ್ 98(1)ನ ವ್ಯಾಪ್ತಿಗೆ ಸೇರಿಸಲಾಗದು ಎಂದು ವಾದ ಮಂಡಿಸಿದ್ದರು.