×
Ad

ಜ.28ಕ್ಕೆ ಸಶಸ್ತ್ರ ಪೊಲೀಸ್ ಕಾನ್‌ ಸ್ಟೇಬಲ್ ಪರೀಕ್ಷೆ

Update: 2024-01-23 21:25 IST

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 3064 ಸಶಸ್ತ್ರ ಪೊಲೀಸ್ ಕಾನ್‌ ಸ್ಟೇಬಲ್ ಹುದ್ದೆಗಳಿಗೆ (ಪುರುಷ, ತೃತೀಯ ಲಿಂಗಿಗಳು) ಲಿಖಿತ ಪರೀಕ್ಷೆ ಇದೇ ತಿಂಗಳು 28ರಂದು ನಡೆಯಲಿದ್ದು, ಈ ಸಂಬಂಧ ಅಭ್ಯರ್ಥಿಗಳು ಪಾಲಿಸಬೇಕಾದ ವಸ್ತ್ರಸಂಹಿತೆ ಮಾರ್ಗಸೂಚಿ ಹೊರಡಿಸಲಾಗಿದೆ.

ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಹಿಂದೆ ನಡೆದಿದ್ದ ಪಿಎಸ್ಸೈ ಹಗರಣವನ್ನು ಸಶಸ್ತ್ರ ಪೊಲೀಸ್ ಕಾನ್‌ ಸ್ಟೇಬಲ್ ಪರೀಕ್ಷೆಯಲ್ಲಿ ಮರುಕಳಿಸದಂತೆ ಎಚ್ಚರ ವಹಿಸುವುದು ಪೊಲೀಸ್ ನೇಮಕಾತಿ ವಿಭಾಗದ ಜವಾಬ್ದಾರಿಯಾಗಿದೆ. ಹೀಗಾಗಿ ಪರೀಕ್ಷೆ ಬರೆಯುವವರು ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.

ಜನವರಿ 28ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರ ವರೆಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ನಿಗದಿತ ಸಮಯಕ್ಕೂ ಮುಂಚಿತವಾಗಿ ಹಾಜರಿರಬೇಕು. ಪುರುಷ ಮತ್ತು ತೃತೀಯಲಿಂಗಿ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಅನ್ನು ಕಡ್ಡಾಯವಾಗಿ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್ ಗಳನ್ನು ಧರಿಸುವುದು, ಜಿಪ್ ಪ್ಯಾಕೆಟ್ ಗಳು, ದೊಡ್ಡ ಬಟನ್ ಗಳು ಇರುವ ಶರ್ಟ್ ಗಳನ್ನು ಧರಿಸುವಂತಿಲ್ಲ.

ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್ ಗಳನ್ನು ಧರಿಸಕೂಡದು. ಪರೀಕ್ಷಾ ಕೇಂದ್ರದೊಳಗೆ ಹೂಗಳನ್ನು ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆ ಧರಿಸುವುದು. ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗ ಧರಿಸುವುದು ನಿಷೇಧಿಸಲಾಗಿದೆ ಎಂದು ನೇಮಕಾತಿ ವಿಭಾಗದ ಡಿಐಜಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News