ದೋಸೆ, ರಾಗಿ ಮುದ್ದೆ ಮಾಡಲು ಹೇಳಿದರೆ ಕೌಟುಂಬಿಕ ದೌರ್ಜನ್ಯವೇ? : ಅತ್ತೆ ವಿರುದ್ಧ ದೂರು ದಾಖಲಿಸಿದ್ದ ಸೊಸೆಗೆ ಹೈಕೋರ್ಟ್ ಪ್ರಶ್ನೆ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ದೋಸೆ ಮತ್ತು ರಾಗಿ ಮುದ್ದೆ ಮಾಡುವಂತೆ ಅತ್ತೆ ಕೇಳುವುದು, ನಿಮ್ಮ ತಲೆ ಕೂದಲು ಉದುರುವುದು ಕೌಟುಂಬಿಕ ದೌರ್ಜನ್ಯವಾಗುತ್ತದೆಯೇ ಎಂದು ಹೈಕೋರ್ಟ್ ಮಹಿಳೆಯೊಬ್ಬರನ್ನು ಮೌಖಿಕವಾಗಿ ಪ್ರಶ್ನಿಸಿದೆ.
ಸೊಸೆ ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಅತ್ತೆ ಮತ್ತು ಆಕೆಯ ಸಂಬಂಧಿಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಪ್ರತಿವಾದಿಯಾದ ದೂರುದಾರ ಮಹಿಳೆ (ಸೊಸೆ) ಖುದ್ದು ನ್ಯಾಯಪೀಠದ ಮುಂದೆ ಹಾಜರಾಗಿ ವಾದ ಮಂಡಿಸಿದರು. ಮಹಿಳೆಯ ವಾದ ಆಲಿಸಿದ ನ್ಯಾಯಪೀಠ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದೀರಿ. ಪತಿ ಊಟ ಮಾಡುವವರೆಗೆ ನನ್ನನ್ನು ಊಟ ಮಾಡಲು ಬಿಡುತ್ತಿರಲಿಲ್ಲ. ಪತಿಗೆ ಬಿಸಿ ದೋಸೆ ಬೇಕು, ಪತಿ ಬೆಳಗ್ಗೆ 10 ಗಂಟೆಗೆ ತಿಂಡಿ ತಿಂದ ಬಳಿಕ ನಾನು ತಿಂಡಿ ತಿನ್ನ ಬೇಕಿತ್ತು ಎಂದು ಹೇಳಿದ್ದೀರಿ. ಇದನ್ನು ಆಧರಿಸಿ ಐಪಿಸಿ ಸೆಕ್ಷನ್ 498ಎ ಅನ್ವಯಿಸಬಹುದೇ? ಏನು ಮೇಡಂ ಇದು ಎಂದು ಮೌಖಿಕವಾಗಿ ಪ್ರಶ್ನಿಸಿತು.
ಮುಂದುವರಿದು, ಕುಟುಂಬದಲ್ಲಿ ಜಗಳಗಳು ನಡೆಯುವುದಿಲ್ಲವೇ? ಪತಿಗೆ ರಾಗಿ ಮುದ್ದೆ ಮಾಡಿಕೊಡಿ ಎಂದು ಅತ್ತೆ ಹೇಳುವುದು ತಪ್ಪೇ? ತಲೆಕೂದಲು ಉದುರಿದ್ದಕ್ಕೆ ಐಪಿಸಿ ಸೆಕ್ಷನ್ 498ಎ ಆರೋಪ ಮಾಡುವುದೇ? ನಿಮಗೆ ತಲೆ ಕೂದಲು ಉದುರುವುದು, ಪತಿಗೆ ದೋಸೆ, ರಾಗಿ ಮುದ್ದೆ ಮಾಡಿಕೊಡಿ ಎಂದು ಹೇಳುವುದು, ನಿಮಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಿಲ್ಲ ಎಂಬುದು ವರದಕ್ಷಿಣೆ ಕಿರುಕುಳವೇ? ಈ ಎಲ್ಲ ಆರೋಪಗಳನ್ನು ವಿಚ್ಚೇದನ ಕೋರಿಕೆ ವಿಚಾರಣೆಯಲ್ಲಿ ಪ್ರಸ್ತಾಪಿಸಬಹುದು. ಕೆಲವೊಂದು ಆರೋಪಗಳನ್ನು ಕ್ರೌರ್ಯಕ್ಕೆ ಸಮನಾಗಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಎಷ್ಟು ದಿನ ಗಂಡನ ಮನೆಯಲ್ಲಿದ್ದಿರಿ? ದೂರುದಾರೆಯ ದೃಷ್ಟಿಯಲ್ಲಿನ ಕ್ರೌರ್ಯವು ಕ್ರೌರ್ಯವಲ್ಲ. ಕಾನೂನಿನ ಅಡಿಯ ಕ್ರೌರ್ಯ ಮಾತ್ರ ಕ್ರೌರ್ಯವಾಗುತ್ತದೆ. ಎಲ್ಲ ಅಹವಾಲುಗಳನ್ನು ಕ್ರೌರ್ಯಕ್ಕೆ ಹೋಲಿಕೆ ಮಾಡಲಾಗದು. ನೀವಿಬ್ಬರೂ ಪರಸ್ಪರ ದೂರು-ಪ್ರತಿದೂರು ದಾಖಲಿಸುವುದು ಕ್ರೌರ್ಯವಲ್ಲ. ಈ ಪ್ರಕರಣದಲ್ಲಿ ಪತಿಯನ್ನು ಕ್ಷಮಿಸುವುದಿಲ್ಲ ಎಂದು ಹೇಳಿತು.
ಮಹಿಳೆಯ ಆರೋಪವೇನು?
ಇದಕ್ಕೂ ಮುನ್ನ ಮಹಿಳೆ ವಾದ ಮಂಡಿಸಿ, ಪತಿಯ ಮನೆಯ ಕಡೆಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ನನಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಿಲ್ಲ. ಪ್ರತಿದಿನ ದೋಸೆ, ಅನ್ನ, ಸೊಪ್ಪು ಮತ್ತು ಬೇಳೆ ಸಾರು ನೀಡುತ್ತಿದ್ದರು. ಆದರೆ, ಅವರು ಮಾತ್ರ ದಿನ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುತ್ತಿದ್ದರು. ನನ್ನ ಮೇಲಿನ ದೌರ್ಜನ್ಯದಿಂದಾಗಿ ನನಗೆ ತಲೆಕೂದಲು ಉದುರಿದೆ. ಅಡುಗೆ ಮನೆಗೆ ಹೋಗಲು ಅತ್ತೆ ನನ್ನನ್ನು ಬಿಡುತ್ತಿರಲಿಲ್ಲ. ನನಗೆ ಬರುತ್ತಿದ್ದ ಸಂಬಳವನ್ನೆಲ್ಲ ಪತಿಗೆ ನೀಡುತ್ತಿದ್ದು, ಖರ್ಚಿಗೆ ಏನೂ ಉಳಿಯುತ್ತಿರಲಿಲ್ಲ. ಐದೂವರೆ ತಿಂಗಳು ಈ ದುರಂತಮಯ ಬದುಕು ಅನುಭವಿಸಿ, ಪತಿಯ ಮನೆಯಿಂದ ಹೊರಬೀಳಬೇಕಾಯಿತು ಎಂದರು.
ತವರು ಮನೆ ಬಳಿ ಬಂದು ರಸ್ತೆಯಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ಅರ್ಜಿದಾರರು ನಿಂದಿಸಿದ್ದಾರೆ. ನನ್ನ ಘನತೆಯನ್ನು ಪ್ರಶ್ನಿಸಿದ್ದಾರೆ. ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆ ಎಂದು ನಿಂದಿಸಿದ್ದಾರೆ. ಇದರಿಂದ, ನೆರೆಹೊರೆಯವರು ನನ್ನನ್ನು ಏನೆಂದು ಕೊಳ್ಳಬೇಡ. ಆದ್ದರಿಂದ, ಅವರ ವಿರುದ್ಧ ಮಾನಹಾನಿ ಪ್ರಕರಣವನ್ನೂ ದಾಖಲಿಸಿದ್ದೇನೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಆರೋಪಿಗಳ ಪರ ವಕೀಲರು ವಾದ ಮಂಡಿಸಿ, ಅತ್ತೆ ಹಾಗೂ ಆಕೆಯ ಇಬ್ಬರು ಸಹೋದರರು ಮತ್ತು ಪತಿಯ ಸ್ನೇಹಿತನ ವಿರುದ್ಧ ಪ್ರತಿವಾದಿ ಮಹಿಳೆ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಲಾಗಿದೆ. ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪತಿ ಈಗಾಗಲೇ ಹಿಂಪಡೆದಿದ್ದು, ಪ್ರಕರಣ ಎಫ್‌ಐಆರ್ ಹಂತದಲ್ಲಿದೆ ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿತು.