ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ ಪ್ರತಿನಿತ್ಯ 3,500 ಕ್ಯೂಸೆಕ್‌ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಸೂಚನೆ

Update: 2026-07-28 16:04 IST

ಬೆಂಗಳೂರು,: ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆಯ ಮಧ್ಯೆಯೇ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿಯೂ ಕರ್ನಾಟಕ ರಾಜ್ಯಕ್ಕೆ ತೀವ್ರ ಹಿನ್ನೆಡೆಯಾಗಿದೆ. ತಮಿಳುನಾಡು ರಾಜ್ಯಕ್ಕೆ 15 ದಿನಗಳ ಕಾಲ ಪ್ರತಿನಿತ್ಯ 3,500 ಕ್ಯೂಸೆಕ್‌ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ ಸಿ) ಸೂಚಿಸಿದೆ.

ಮಂಗಳವಾರ ಸಿಡಬ್ಲ್ಯೂಆರ್‌ ಸಿ ನೀಡಿರುವ ಈ ಆದೇಶದ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳಲ್ಲಿ ತಮಿಳುನಾಡು ರಾಜ್ಯಕ್ಕೆ ಒಟ್ಟು 4.56 ಟಿಎಂಸಿಯಷ್ಟು ನೀರನ್ನು ಹರಿಸಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳ ನೀರಿನ ಸಂಗ್ರಹ, ಮಳೆಯ ಪ್ರಮಾಣ ಹಾಗೂ ಒಳಹರಿವನ್ನು ಪರಾಮರ್ಶಿಸಲು ನಡೆದ ಸಿಡಬ್ಲ್ಯೂಆರ್‌ ಸಿ ಸಭೆಯಲ್ಲಿ ಈ ಮೇಲ್ಕಂಡ ತೀರ್ಮಾನ ಮಾಡಲಾಗಿದೆ.

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಇಲ್ಲ. ಹೀಗಾಗಿ ಈಗಾಗಲೇ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಅಭಾವ ಸೃಷ್ಟಿಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರನ್ನು ಜಲಾಶಯಗಳಿಂದ ಹೊರಗೆ ಬಿಡುವುದು ಕೆಆರ್‌ ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳ ನೀರಿನ ಸಂಗ್ರಹದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಹಿಂದೆ 2 ಬಾರಿ ಸಭೆ ನಡೆದಿದ್ದರೂ ಸಿಡಬ್ಲ್ಯೂಆರ್‌ ಸಿ ನೀರು ಹರಿಸುವ ಅಥವಾ ನೀರು ಹರಿಸದಿರುವ ಬಗ್ಗೆ ಯಾವುದೇ ಆದೇಶವನ್ನು ನೀಡಿರಲಿಲ್ಲ. ಕರ್ನಾಟಕ ರಾಜ್ಯದ ಪರವಾಗಿ ಸಭೆಯಲ್ಲಿ ಭಾಗವಹಿಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ನೇತೃತ್ವದ ಅಧಿಕಾರಿಗಳು ರಾಜ್ಯದ ವಸ್ತುಸ್ಥಿತಿಯನ್ನು ಸಮಿತಿಗೆ ಮನವರಿಕೆ ಮಾಡಿಕೊಟ್ಟರು. ಆದರೆ, ಕರ್ನಾಟಕ ರಾಜ್ಯದ ವಾದವನ್ನು ಸಮಿತಿ ತಳ್ಳಿಹಾಕಿದೆ.

ಸಿಡಬ್ಲ್ಯೂಆರ್‍ಸಿ ನೀಡಿರುವ ಈ ಸೂಚನೆಯನ್ನು ಪ್ರಶ್ನಿಸಿ ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ಕ್ಕೆ (ಸಿಡಬ್ಲ್ಯೂಎಂಎ)ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಕುರಿತು ಸಿಎಂ ಡಿ.ಕೆ. ಶಿವಕುಮಾರ್, ಕಾನೂನು ತಜ್ಞರು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

 

‘ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ವರ್ಷ ಪೂರ್ತಿ ಕುಡಿಯುವ ನೀರು ಬೇಕೇಬೇಕು. ಸಿಡಬ್ಲ್ಯೂಆರ್‍ಸಿ ಸೂಚನೆ ಸಂಬಂಧ ಸಿಎಂ ಜತೆ ಚರ್ಚಿಸಲಾಗುವುದು. ಅಲ್ಲದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ತಜ್ಞರ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’

-ರಾಮಲಿಂಗಾರೆಡ್ಡಿ ಜಲಸಂಪನ್ಮೂಲ ಸಚಿವ

‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡಲು ಹೇಳಿದೆ. ಹೀಗಾಗಿ, ತಮಿಳುನಾಡಿಗೆ ನೀರನ್ನು ಕೊಡಬೇಕಾದ ಅನಿವಾರ್ಯತೆ ನಮಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಏನನ್ನು ಹೇಳುತ್ತಾರೆ. ಅದರ ಮೇಲೆ ತೀರ್ಮಾನ ಆಗಲಿದೆ’

-ಡಾ.ಯತೀಂದ್ರ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News