‘ಬೆಂಗಳೂರು ಕಂಬಳ’ಕ್ಕೆ ಚಾಲನೆ ನೀಡಲಿರುವ ಅಶ್ವಿನಿ ಪುನೀತ್ ರಾಜಕುಮಾರ್
ಬೆಂಗಳೂರು: ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.25 ಬೆಳಗ್ಗೆ 10.30ಕ್ಕೆ ನಟ ಪುನೀತ್‍ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ‘ಕಂಬಳ ಕರೆ’ಗೆ ಚಾಲನೆ ನೀಡಲಿದ್ದು, ಸಂಜೆ 5.30ಕ್ಕೆ ನಡೆಯುವ ಮುಖ್ಯಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಬೆಳಗ್ಗೆ 11 ಗಂಟೆಯ ಬಳಿಕ ಹಲವು ನಟ ನಟಿಯರು ಭಾಗಿಯಾಗುತ್ತಾರೆ. ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಸಂಪುಟ ಸಚಿವರು, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ರವಿವಾರ(ನ.26) ಸಂಜೆ 5.30ಕ್ಕೆ ಕಂಬಳದ ಸಮಾರೋಪ ಕಾರ್ಯಕ್ರಮ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ಆರು ವಿಭಾಗಗಳಲ್ಲಿ ಕಂಬಳವನ್ನು ನಡೆಸಲಾಗುತ್ತಿದೆ. ಕಂಬಳ ಇತಿಹಾಸದಲ್ಲಿ ತೃತೀಯ ಬಹುಮಾನ ಇರಲಿಲ್ಲ. ಈ ಸಲ ಮೂರನೆ ಸ್ಥಾನಕ್ಕೂ 4 ಗ್ರಾಂ ಚಿನ್ನ 25 ಸಾವಿರ ರೂ.ಬಹುಮಾನ ನೀಡಲು ನಿರ್ಧರಿಸಿದ್ದೇವೆ. ಮೊದಲನೆ ಬಹುಮಾನ 16 ಗ್ರಾಂ ಚಿನ್ನ 1ಲಕ್ಷ ರೂ.ನಗದು, 2ನೆ ಬಹುಮಾನ 8 ಗ್ರಾಂ ಚಿನ್ನ 50 ಸಾವಿರ ರೂ.ನಗದನ್ನು ನೀಡಲಾಗುತ್ತದೆ. ಕೋಣ ಓಡಿಸಿ ವಿಜಯಶಾಲಿ ಆದವರಿಗೆ ಆಕರ್ಷಕ ಬಹುಮಾನವಿದೆ ಎಂದು ಅವರು ತಿಳಿಸಿದರು.
27 ಎಕರೆ ಜಾಗದಲ್ಲಿ ಬೃಹತ್ ಕಂಬಳ ಕೂಟ ಆಯೋಜನೆಗೊಂಡಿದೆ; ಈ ಕೂಟಕ್ಕೆ 7ರಿಂದ 8 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಕಂಬಳದ ಜೊತೆಗೆ ನಿರಂತರವಾಗಿ ಸಾಂಸ್ಕತಿಕ ಕಾರ್ಯಕ್ರಮಗಳು, ಕರಾವಳಿಯ ಯಕ್ಷಗಾನ, ಹುಲಿ ಕುಣಿತ ಮುಂತಾದ ಕಲೆಗಳ ಪ್ರದರ್ಶನ ನಡೆಯಲಿದೆ. ಅಲ್ಲದೆ ಖ್ಯಾತ ಕಲಾವಿದರ ಸಂಗೀತ ಸಂಜೆ ನಡೆಯಲಿದೆ. ಕಂಬಳದಲ್ಲಿ ಸ್ಥಳೀಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ವೀಕ್ಷಕ ವಿವರಣೆ ಇರಲಿದೆ ಎಂದು ಅಶೋಕ್ ರೈ ಹೇಳಿದರು.
ಅರಮನೆ ಮೈದಾನಕ್ಕೆ ಜನರು ಬರಲು ಸುಲಭವಾಗುವಂತೆ 150 ಹೆಚ್ಚುವರಿ ಬಸ್‍ಗಳನ್ನು ಈ ಮಾರ್ಗಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ವಿಶಾಲ ಪಾರ್ಕಿಂಗ್, ಊಟದ ವ್ಯವಸ್ಥೆ, ಭದ್ರತೆ ಹೀಗೆ ಎಲ್ಲವನ್ನೂ ಸುಸೂತ್ರವಾಗಿ ಕಲ್ಪಿಸಲಾಗಿದೆ ಎಂದು ಅಶೋಕ್ ರೈ ತಿಳಿಸಿದರು. ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಕಂಬಳ ಇತಿಹಾಸ ತಜ್ಞ ಗುಣುಪಾಲ ಉಪಸ್ಥಿತರಿದ್ದರು.
ಸಂಚಾರದಲ್ಲಿ ಮಾರ್ಪಾಡು: ನಗರದ ಅರಮನೆ ಮೈದಾನದಲ್ಲಿ ನ.25 ಮತ್ತು 26ರಂದು ಬೆಂಗಳೂರು ಕಂಬಳ-ನಮ್ಮ ಕಂಬಳ ಕಾರ್ಯಕ್ರಮ ಆಯೋಜನೆಯಾಗಿದ್ದು, ಈ ಸಂಬಂಧ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಸೇರುವ ಸಾಧ್ಯತೆ ಇದೆ. ಹೀಗಾಗಿ ಅರಮನೆ ಮೈದಾನ ರಸ್ತೆಯಲ್ಲಿ ಕೆಲ ಸಂಚಾರ ಮಾರ್ಪಾಡು ಮತ್ತು ವಾಹನಗಳ ನಿಲುಗಡೆ ಸ್ಥಳ ನಿಗದಿಪಡಿಸಲಾಗಿದೆ.
ನಗರದ ಸಿಬಿಡಿ ಪ್ರದೇಶ, ಬಳ್ಳಾರಿ ರಸ್ತೆ ಹೆಬ್ಟಾಳ, ಯಶವಂತಪುರ ಕಡೆಯಿಂದ ಬರುವ ವಾಹನಗಳು ಮೇಖ್ರಿ ಸರ್ಕಲ್ ತಿರುವ ಪಡೆದು ಗೇಟ್ ನಂ-01ರ ಕೃಷ್ಣವಿಹಾರ್‍ರಲ್ಲಿ ಪ್ರವೇಶಿಸಿ, ವಾಹನ ಪಾರ್ಕ್ ಮಾಡಬೇಕು. ಕ್ಯಾಬ್ ಸೇವೆ ಬಳಸಿಕೊಳ್ಳುವವರು ಗೇಟ್ ನಂ.2 ಪ್ರವೇಶಿಸಿ ನಿಗದಿತ ಸ್ಥಳದಲ್ಲಿ ಇಳಿದು ಗೇಟ್ ನಂ.03 ಮೂಲಕ ಕ್ಯಾಬ್‍ಗಳು ನಿರ್ಗಮಿಸಬೇಕು. ವಾಪಸ್ ಹೋಗುವ ವಾಹನಗಳು ಕಡ್ಡಾಯವಾಗಿ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮೂಲಕ ತೆರಳಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪರ್ಯಾಯ ಮಾರ್ಗ: ಅರಮನೆ ರಸ್ತೆ, ಎಂ.ವಿ.ಜಯರಾಮ್ ರಸ್ತೆ, ಬಳ್ಳಾರಿ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಮಿಲ್ಲರ್ ರಸ್ತೆ, ಜಯಮಹಲ್ ರಸ್ತೆಗಳನ್ನು ಬಳಸದೆ ಬೇರೆ ಮಾರ್ಗದಲ್ಲಿ ಹೋಗಲು ಕೋರಲಾಗಿದೆ. ಹಾಗೆಯೇ ಪ್ಯಾಲೆಸ್ ರಸ್ತೆ, ಎಂ.ವಿ.ಜಯರಾಮ್ ರಸ್ತೆ. ಸಿ.ವಿ ರಾಮನ್ ರಸ್ತೆ, ವಸಂತನಗರ, ಜಯಮಹಲ್ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿ ದುರ್ಗ ರಸ್ತೆ, ಬಳ್ಳಾರಿ ರಸ್ತೆ, ತರಳಬಾಳು ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜು ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಭಾರೀ ಸರಕು ಸಾಗಣೆ ವಾಹನಗಳ ಸಂಚಾರವನ್ನು ಶನಿವಾರ ಹಾಗೂ ರವಿವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.