×
Ad

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ; ತೆರಿಗೆ ವಂಚಿಸುತ್ತಿದ್ದ ಜಾಲ ಪತ್ತೆ

Update: 2023-11-28 22:21 IST

Photo: PTI

ಬೆಂಗಳೂರು: ಕಬ್ಬಿಣ ಮತ್ತು ಉಕ್ಕು ಹಾಗೂ ಸ್ಕ್ರ್ಯಾಪ್ ವಲಯದ 86ಕ್ಕೂ ಹೆಚ್ಚು ವರ್ತಕರ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 64ಕೋಟಿ ರೂ.ಯಷ್ಟು ತೆರಿಗೆ ವಂಚನೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.

ವರ್ತಕರು ಇಲಾಖೆಯಿಂದ ಈಗಾಗಲೇ ನೋಂದಣಿ ಅಮಾನತ್ತಿನಲ್ಲಿರುವ ಅಥವಾ ರದ್ದುಗೊಂಡಿರುವ ಜಿಎಸ್‍ಟಿಎನ್ ಸಂಖ್ಯೆಗಳನ್ನು ಬಳಸಿಕೊಂಡು ಅವುಗಳಿಂದ ಕೃತಕ ಖರೀದಿ ಬಿಲ್‍ಗಳನ್ನು ಸೃಷ್ಠಿಸಿ ಅವುಗಳಿಂದ ಹೂಡುವಳಿ ತೆರಿಗೆ ಜಮೆ(ಐಟಿಸಿ) ಪಡೆದುಕೊಂಡು ತೆರಿಗೆ ಪಾವತಿಸದೇ ವಂಚಿಸುತ್ತಿದ್ದರು.

ಹಾಗೆಯೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಪಡೆದು, ಯಾವುದೇ ವ್ಯವಹಾರ ಸ್ಥಳಗಳನ್ನು ಹೊಂದಿಲ್ಲದೇ ನಕಲಿ ಖರೀದಿ ಬಿಲ್‍ಗಳನ್ನು ನೀಡುವುದರ ಮೂಲಕ ತೆರಿಗೆ ತಪ್ಪಿಸುವಿಕೆಯಲ್ಲಿ ಭಾಗವಹಿಸುತ್ತಿದ್ದದ್ದು, ತನಿಖೆಯಿಂದ ಬಹಿರಂಗಗೊಂಡಿದೆ.

ಈಗಾಗಲೇ ವರ್ತಕರು ಬಿಲ್‍ನಿಂದ ಒಟ್ಟು 352 ಕೋಟಿ ರೂ.ಹೆಚ್ಚು ವಹಿವಾಟನ್ನು ಕೃತಕವಾಗಿ ಸೃಷ್ಟಿಸಿ, 64 ಕೋಟಿ ರೂ.ನಷ್ಟು ನಕಲಿ ಐಟಿಸಿ ಬಳಿಸಿಕೊಂಡು ತೆರಿಗೆ ವಂಚನೆ ಮಾಡಿದ್ದಾರೆ. ಇದು ಜಿಎಸ್‍ಟಿ ಕಾನೂನಿನಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಜುಲ್ಮಾನೆ ವಿಧಿಸುವಿಕೆ, ಸರಕುಗಳ ಮುಟ್ಟುಗೋಲು ಸ್ವತ್ತುಗಳ ಮತ್ತು ಬ್ಯಾಂಕ್ ಖಾತೆಗಳ ಮುಟ್ಟುಗೋಲು ಮುಂತಾದ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News