×
Ad

ಅತ್ತಿಬೆಲೆ ಪಟಾಕಿ ದುರಂತ: ಮೃತ ಕಾರ್ಮಿಕರೆಲ್ಲರೂ ಪದವೀಧರರು!

Update: 2023-10-08 22:59 IST

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮೃತಪಟ್ಟಿರುವ ಕೂಲಿ ಕಾರ್ಮಿಕರೆಲ್ಲರೂ ಪದವೀಧರರಾಗಿದ್ದು, ಓದಿನೊಂದಿಗೆ ದುಡಿದು ತಮ್ಮ ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಬೇಕೆಂಬ ಆಸೆಯೊಂದಿಗೆ ಪಟಾಕಿ ಮಳಿಗೆಯಲ್ಲಿ ಅರೆಕಾಲಿಕ ಕೆಲಸಕ್ಕೆ ಬಂದಿದ್ದು, ಶನಿವಾರ ನಡೆದ ದುರಂತದಲ್ಲಿ ಅಸುನೀಗಿದ್ದಾರೆ.

ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. ಎಲ್ಲರೂ ತಮಿಳುನಾಡು ಮೂಲದವರಾಗಿದ್ದು, ಇವರಲ್ಲಿ ಆರು ಮಂದಿ ಇನ್ನೂ ಪದವಿ ಮತ್ತು ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗಳು ಎಂದು ಗೊತ್ತಾಗಿದೆ.

ದುರಂತದಲ್ಲಿ ಗಿರಿ, ಸಚಿನ್, ವಿಜಯ ರಾಘವನ್, ವಿಳಂಬರತಿ, ಆಕಾಶ, ವೆಡಿಯಪ್ಪನ್, ಆದಿಕೇಶವ, ಪ್ರಕಾಶ್, ವಸಂತರಾಜು, ಅಬ್ಬಾಸ್, ಪ್ರಭಾಕರನ್, ನಿತೀಶ್, ಸಂತೋಷ್ ಮೃತಪಟ್ಟಿದ್ದು, ಇನ್ನೊಬ್ಬನ ಹೆಸರು ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಟು ಮಂದಿ ಒಂದೇ ಊರಿನವರು: ದುರಂತದಲ್ಲಿ ಮೃತಪಟ್ಟ 14 ಮಂದಿಯ ಪೈಕಿ ಎಂಟು ಮಂದಿ ಒಂದೇ ಊರಿನವರಾಗಿದ್ದು, ಧರ್ಮಪುರಿ ಜಿಲ್ಲೆಯ ಅಮ್ಮಪೇಟೆ ಗ್ರಾಮದ ಎಂಟು ಮಂದಿ, ತಿರುಪ್ಪೂರು ಜಿಲ್ಲೆಯ ವಾಣಿ ಅಂಬಾಡಿ ಗ್ರಾಮದ ಇಬ್ಬರು ಹಾಗೂ ಕಲ್ಲಕುರುಚ್ಚಿ ಜಿಲ್ಲೆಯ ಮೂವರು ಸಾವಿಗೀಡಾಗಿದ್ದಾರೆ.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಅಮ್ಮಾಪಟ್ಟಿ ಗ್ರಾಮದಿಂದ ಅತ್ತಿಬೆಲೆ ಪಟಾಕಿ ಗೋದಾಮಿಗೆ 10 ಜನ ಕಾರ್ಮಿಕರು ಕೆಲಸಕ್ಕಾಗಿ ಬಂದಿದ್ದರು. ಇವರಲ್ಲಿ 8 ಮಂದಿ ಮೃತಪಟ್ಟಿದ್ದು, ಅವರನ್ನು ಆದಿಕೇಶವನ್(17), ಗಿರಿ(17), ವೇಡಪ್ಪನ್(22), ಆಕಾಶ್(17), ವಿಜಯರಾಘವನ್(19), ವೆಳಂಬರದಿ(20), ಪ್ರಕಾಶ್(20), ಸಚಿನ್(22) ಎಂದು ಗುರುತಿಸಲಾಗಿದೆ.

ಅಲ್ಲದೇ, ಕಲ್ಲಕುರುಚ್ಚಿ ಜಿಲ್ಲೆಯ ಪ್ರಭಾಕರನ್ (17), ವಸಂತರಾಜ್ (23), ಅಪ್ಪಾಸ್ (23) ಮೃತಪಟ್ಟವರು. ಇನ್ನಿಬ್ಬರ ಮೃತದೇಹ ಪತ್ತೆಯಾಗಿದ್ದು, ಅವರುಗಳ ಗುರುತು ಸಿಕ್ಕಿಲ್ಲ.

ಬೆಂಕಿ ಅವಘಡದಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ನವೀನ್, ರಾಜೇಶ್, ವೆಂಕಟೇಶ್ ಎಂಬುವವರನ್ನು ಬೆಂಗಳೂರಿನ ಮಡವಾಲದ ಸೈಂಟ್‍ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜಯ್, ಚಂದ್ರು, ರಾಜೇಶ್ ಮತ್ತು ಫೌಲ್ ಕಬೀರ್ ಎಂಬುವವರಿಗೆ ಅತ್ತಿಬೆಲೆಯ ಆಕ್ಸ್‍ಫರ್ಡ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತದೇಹ ತೋರಿಸದಿದ್ದಕ್ಕೆ ಕುಟುಂಬಸ್ಥರ ಆಕ್ರೋಶ: ಮೃತಪಟ್ಟಿರುವ ಕಾರ್ಮಿಕರ ಮೃತದೇಹ ತೋರಿಸಲು ಆಸ್ಪತ್ರೆಯವರು ಹಾಗೂ ಪೊಲೀಸರು ಹಿಂದೇಟು ಹಾಕುತ್ತಿದ್ದು, ‘ಮೃತರ ತಂದೆ-ತಾಯಿಗಾದರೂ ನೋಡಲು ಅವಕಾಶ ಮಾಡಿಕೊಡಿ’ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆಸ್ಪತ್ರೆ ಬಳಿ ಹೋದರೆ ಪೊಲೀಸರು ಲಾಠಿಯಿಂದ ಹೊಡೆಯುತ್ತಿದ್ದಾರೆ. ಇದು ವ್ಯವಸ್ಥೆನಾ. ನಮ್ಮ ನೋವಿಗೆ ಸ್ಪಂದನೆ ಇಲ್ಲವೇ, ನಮ್ಮ ಮಕ್ಕಳನ್ನು ನಮಗೆ ತೋರಿಸಿ' ಎಂದು ಸಂಬಂಧಿಕರು ಗೋಗರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News