×
Ad

ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆದರೆ ಸಂತೋಷ : ಬಿ.ಶ್ರೀರಾಮುಲು

"ಪ್ರಿಯಾಂಕ್ ಖರ್ಗೆ ಅವರನ್ನು ಡಿಸಿಎಂ ಮಾಡಲು ದಿಲ್ಲಿಯಲ್ಲಿ ಯೋಜನೆ"

Update: 2025-10-23 17:32 IST

 ಬಿ.ಶ್ರೀರಾಮುಲು

ಹುಬ್ಬಳ್ಳಿ : ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆದರೆ ಸಂತೋಷ. ಹಿಂದುಳಿದ ವರ್ಗದ ನಾಯಕರೊಬ್ಬರು ಮುಖ್ಯಮಂತ್ರಿ ಆದಂತಾಗುತ್ತದೆ. ವಾಲ್ಮೀಕಿ ಸಮುದಾಯಕ್ಕೆ ಶಕ್ತಿ ಸಿಗುತ್ತದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನಸ್ಸಿನ ಮಾತನ್ನು ಯತೀಂದ್ರ ಹೇಳಿದ್ದಾರೆ. ನವೆಂಬರ್ ಕ್ರಾಂತಿ ಬಗ್ಗೆ ಮಾತನಾಡಿದ ಕೆ.ಎನ್.ರಾಜಣ್ಣ ರಾಜೀನಾಮೆ ಕೊಡಬೇಕಾಯಿತು. ಈಗ ಸ್ವತಃ ಸಿದ್ದರಾಮಯ್ಯನವರ ಪುತ್ರ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ರಾಜಕೀಯ ಸಂಧ್ಯಾ ಕಾಲದಲ್ಲಿದ್ದಾರೆ ಅಂತ ಯತೀಂದ್ರ ಹೇಳಿದ್ದಾರೆ. ಇದರ ಅರ್ಥ ಮುಖ್ಯಮಂತ್ರಿ ಬದಲಾವಣೆ ಖಚಿತ. ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಬಿಡುವ ಹಂತದಲ್ಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು.

ಪ್ರಿಯಾಂಕ್ ಖರ್ಗೆ ಡಿಸಿಎಂ ಮಾಡಲು ಯೋಜನೆ: ಸಚಿವ ಪ್ರಿಯಾಂಕ್ ಖರ್ಗೆಯನ್ನು ಉಪ ಮುಖ್ಯಮಂತ್ರಿ ಮಾಡಲು ದಿಲ್ಲಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿಯೆ ಆರೆಸ್ಸೆಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರುವ ಕೆಲಸವಾಗುತ್ತಿದೆ. ಪ್ರಿಯಾಂಕ್ ಖರ್ಗೆ ಪುಕ್ಕಟೆ ಜನಪ್ರಿಯತೆ ಪಡೆಯಲು ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಯೋಜನೆ ಸಾಕಾರಗೊಂಡರೆ ಪ್ರಿಯಾಂಕ್ ಖರ್ಗೆ ಉಪ ಮುಖ್ಯಮಂತ್ರಿ ಆಗೋದು ಖಚಿತ ಎಂದು ಶ್ರೀರಾಮುಲು ತಿಳಿಸಿದರು.

ಚಿತ್ತಾಪುರದಲ್ಲಿ ಸರ್ವಾಧಿಕಾರಿ ಧೋರಣೆ ನಡಿತಾ ಇದೆ. ಆರೆಸ್ಸೆಸ್ ಮತ್ತು ಭೀಮ್ ಆರ್ಮಿ ಪಥ ಸಂಚಲನಕ್ಕಾಗಿ ಅನುಮತಿ ಕೇಳಿವೆ. ಉದ್ದೇಶಪೂರ್ವಕವಾಗಿ ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟಲಾಗುತ್ತಿದೆ. ಪ್ರಿಯಾಂಕ್ ಖರ್ಗೆಗೆ ಅವರ ಇಲಾಖೆಯ ಕೆಲಸ ಮಾಡಲು ಆಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಅವರು ದೂರಿದರು.

ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿಯಾದ ನೌಕರರನ್ನು ಅಮಾನತು ಮಾಡಲಾಗಿದೆ. ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಯಲ್ಲಿ ಭಾಗಿಯಾಗಬಹುದು ಎಂದು ಕೇಂದ್ರ ಸರಕಾರವೇ ಆದೇಶಿಸಿದೆ. ಹೀಗಿರುವಾಗ ಸರಕಾರಿ ನೌಕರರನ್ನು ಅಮಾನತು ಮಾಡಲು ಇವರಿಗೇನು ಅಧಿಕಾರ ಇದೆ ಎಂದು  ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News