×
Ad

ಬಳ್ಳಾರಿ ಬ್ಯಾನರ್ ಗಲಾಟೆ; 26 ಮಂದಿ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

Update: 2026-01-05 22:40 IST
ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಬಳ್ಳಾರಿ ಬ್ಯಾನರ್‌ ಗಲಾಟೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ 26 ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಬಳ್ಳಾರಿ ಬ್ರೂಸ್‌ಪೇಟೆ ಠಾಣೆ ಪೊಲೀಸರು ಬಂಧಿಸಿರುವ 26 ಮಂದಿ ಆರೋಪಿಗಳನ್ನು ಸೋಮವಾರ ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ಎಸಿಜೆಎಂ) ಕೆ.ಎನ್‌. ಶಿವಕುಮಾರ್ ಅವರ ಮುಂದೆ ಹಾಜರುಪಡಿಸಲಾಯಿತು. ಕೆಲ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳನ್ನು ಜನವರಿ 19ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.

ಇದಕ್ಕೂ ಮುನ್ನ ವಿಚಾರಣೆ ವೇಳೆ ನ್ಯಾಯಾಧೀಶರು ಆರೋಪಿಗಳನ್ನು ಕುರಿತು ನಿಮ್ಮ ಬಂಧನದ ಬಗ್ಗೆ ನಿಮ್ಮ ಕುಟುಂಬಕ್ಕೆ ಮಾಹಿತಿ ಇದೆಯೇ ಎಂದು ಕೇಳಿದರು. ಇದಕ್ಕೆ ಎಲ್ಲ ಆರೋಪಿಗಳು ಗೊತ್ತಿದೆ ಎಂದು ಉತ್ತರಿಸಿದರು. ಬಳಿಕ ಎಲ್ಲ ಆರೋಪಿಗಳಿಗೂ ಒಂದೇ ಬಂಧನದ ಮೆಮೊ ನೀಡಿರುವುದು ಏಕೆ? ಪ್ರತ್ಯೇಕ ಮೆಮೊ ಏಕೆ ಕೊಟ್ಟಿಲ್ಲ ಎಂದು ತನಿಖಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಪೊಲೀಸರು ಆರೋಪಿಗಳಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ರಿಮ್ಯಾಂಡ್‌ ಅರ್ಜಿ ಸಲ್ಲಿಸಿದರು.

ಪ್ರಕರಣದ ಪ್ರಮುಖ ಆರೋಪಿ ಗನ್‌‌ಮ್ಯಾನ್‌ ಗುರುಚರಣ್‌ ಸಿಂಗ್‌ ಎಂಬಾತನನ್ನು ಕುರಿತು ನ್ಯಾಯಾಧೀಶರು, ಪೊಲೀಸರು ಯಾವಾಗ ಬಂಧಿಸಿದರು ಎಂದು ಕೇಳಿದರು. ಇದಕ್ಕೆ ಆತ ಹಿಂದಿಯಲ್ಲಿ ನಿನ್ನೆ ಎಂದು ಹೇಳಿದ. ನಿಮ್ಮ ಪರ ವಕಾಲತ್ತು ವಹಿಸಲು ವಕೀಲರು ಇದ್ದಾರೆಯೇ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಯಾರೂ ಇಲ್ಲ ಎಂದ ಗುರಚರಣ್‌ ಸಿಂಗ್‌ ಹೇಳಿದರು. 

ಈ ವೇಳೆ ಮತ್ತೆ ಬ್ರೂಸ್ ಪೇಟೆ ಪೊಲೀಸರ ಮೇಲೆ ಗರಂ ಆದ ನ್ಯಾಯಾಧೀಶರು, ನಿಮಗೆ ಕಾಮನ್‌‌ಸೆನ್ಸ್‌ ಇಲ್ವಾ? ಆರೋಪಿಗೆ ಅರೆಸ್ಟ್‌ ವಾರೆಂಟ್‌ ಬಗ್ಗೆ ತಿಳಿಸಬೇಕಲ್ಲವೇ? ಬಳ್ಳಾರಿಯಿಂದ ಕರೆದುಕೊಂಡು ಬರುವುದಲ್ಲ. ಬಂಧನ ಪ್ರಕ್ರಿಯೆ ಸರಿಯಾಗಿ ಮಾಡಲು ಬರುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಕೋರ್ಟ್‌ ಬಳಿ ಬಿಗಿ ಭದ್ರತೆ:

ಪ್ರಕರಣದ ಆರೋಪಿಗಳನ್ನು ಕರೆತರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಬಳಿ ಸ್ಥಳೀಯ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು. ಹೆಚ್ಚಿನ ಭದ್ರತೆಗಾಗಿ 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ವಿಚಾರಣೆ ಬಳಿಕ ಆರೋಪಿಗಳನ್ನು ಪೊಲೀಸ್‌ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News