ಬಳ್ಳಾರಿ ಗುಂಪು ಘರ್ಷಣೆ| ವ್ಯಕ್ತಿ ಸಾವನ್ನಪ್ಪಿದ್ದು ಪೊಲೀಸ್ ರಿವಾಲ್ವರ್‌ನಿಂದ ಹಾರಿದ ಗುಂಡಿನಿಂದಲ್ಲ : ಡಾ.ಜಿ.ಪರಮೇಶ್ವರ್
ತುಮಕೂರು: ವಾಲ್ಮೀಕಿ ಜಯಂತಿಯ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿಯ ಜನಾರ್ದನ ರೆಡ್ಡಿ ಮತ್ತು ನಾರಾ ಭರತ್ ರೆಡ್ಡಿ ಅವರ ನಡುವಿನ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿರುವ ಬುಲೆಟ್ ಸರ್ವಿಸ್ ರಿವಾಲ್ವರ್‌ನಿಂದ ಹಾರಿದ ಗುಂಡಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ದೇಹದಲ್ಲಿದ್ದ ಗುಂಡನ್ನು ಎಫ್.ಎಸ್.ಐ.ಎಲ್‌ಗೆ ಕಳುಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ತಿಳಿಗೊಳಿಸಲು ನಿಯಂತ್ರಿಸಲಾಗಿರುವ ಎಡಿಜಿಪಿ ಅವರು ನೀಡಿರುವ ಪ್ರಾಥಮಿಕ ವರದಿಯ ಪ್ರಕಾರ, ವ್ಯಕ್ತಿಯ ದೇಹದಲ್ಲಿ ಸಿಕ್ಕಿರುವ ಗುಂಡಿಗೂ, ನಮ್ಮ ಇಲಾಖೆಯ ಸರ್ವಿಸ್ ರಿವಾಲ್ವರ್ ಗುಂಡಿಗೂ ತಾಳೆ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ನಿಖರವಾದ ಮಾಹಿತಿಗೆ ಎಫ್.ಎಸ್.ಐ.ಎಲ್‌ಗೆ ಕಳುಹಿಸಲಾಗಿದೆ ಎಂದರು.
ಬಳ್ಳಾರಿ ಎಸ್ಪಿಯಾಗಿ ಒಂದು ದಿನದ ಹಿಂದೆ ಚಾರ್ಜ್ ತೆಗೆದುಕೊಂಡಿದ್ದ ನವೀನ್ ಅವರಿಗೆ ದಿಢೀರ್ ಎಂದು ಉದ್ಬವವಾಗುವ ಇಂತಹ ಘಟನೆಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತರಬೇತಿ ಆಗಿರುತ್ತದೆ. ಹಾಗಾಗಿ ಸ್ಥಳದಲ್ಲಿದ್ದು ಅದನ್ನು ನಿಭಾಯಿಸಬೇಕಾಗಿರುವುದು ಅವರ ಕರ್ತವ್ಯ. ಎಷ್ಟು ದಿನ ಎಂಬುದು ಮುಖ್ಯವಲ್ಲ ಎಂದ ಗೃಹ ಸಚಿವರು, ತಾತ್ಕಾಲಿಕವಾಗಿ ಬಳ್ಳಾರಿ ಜಿಲ್ಲೆಗೆ ಈ ಹಿಂದೆ ಬಳ್ಳಾರಿಯಲ್ಲಿ ಕೆಲಸ ಮಾಡಿದ್ದ ಚಿತ್ರದುರ್ಗ ಎಸ್ಪಿಮತ್ತು ದಾವಣಗೆರೆ ಎಸ್ಪಿಯನ್ನು ನಿಯೋಜಿಸಲಾಗಿದೆ. ಶೀಘ್ರದಲ್ಲಿಯೇ ಒಳ್ಳೆಯ ತರಬೇತಿ ಹೊಂದಿದ, ಅನುಭವಿ ಅಧಿಕಾರಿಯನ್ನು ಎಸ್ಪಿಯಾಗಿ ಕಳುಹಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಘಟನೆ ನಡೆದಿದೆ, ಅದನ್ನು ರಾಜಕೀಯಗೊಳಿಸುವುದು ತರವಲ್ಲ. ಇದೊಂದು ಸೂಕ್ಷ್ಮ ವಿಚಾರ. ರಾಜಕೀಯ ನಾಯಕರು ಬಾಯಿಗೆ ಬಂದಂತೆ ಮಾತನಾಡಿ, ಅದರಿಂದ ಪ್ರಚೋದನೆಗೆ ಒಳಗಾಗಿ ಆನಾಹುತಗಳಾದರೆ, ಅಂತಹವರ ವಿರುದ್ಧ ಯಾವ ಮುಲಾಜಿಗೂ ಒಳಗಾಗದೆ ಕ್ರಮ ಕೈಗೊಳ್ಳುತ್ತೇವೆ. ನಾನು ಸದ್ಯಕ್ಕೆ ಬಳ್ಳಾರಿಗೆ ಹೋಗುತ್ತಿಲ್ಲ. ವರದಿ ಬಂದ ನಂತರ ಅಗತ್ಯವೆನಿಸಿದರೆ ತೆರಳಿ, ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತೇನೆ. ಈಗ ಆ ಸಂದರ್ಭ ಒದಗಿ ಬಂದಿಲ್ಲ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.