×
Ad

ಸರಕಾರಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿ ನೀಡುವುದು ನಿಷೇಧ

Update: 2025-12-10 22:29 IST

ಬೆಂಗಳೂರು: ವಿವಿಧ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳು ಸ್ಮರಣಿಕೆ ಮತ್ತು ಟ್ರೋಫಿಗಳ ಖರೀದಿಗೆ ಅಧಿಕ ಹಣವನ್ನು ಖರ್ಚು ಮಾಡುತ್ತಿವೆ. ಹೀಗಾಗಿ ಸರಕಾರಿ ಪ್ರಾಯೋಜಿತ ಅಥವಾ ಅನುದಾನಿತ ಕಾರ್ಯಕ್ರಮಗಳ ಸಂದರ್ಭದಲ್ಲಿ ಸ್ಮರಣಿಕೆ, ಟ್ರೋಫಿ ಮತ್ತು ಅಂತಹ ವಸ್ತು ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.

ಪರಿಸರ ಕಾಳಜಿ, ಆರ್ಥಿಕತೆ, ಸರಳತೆ, ಸಂಪನ್ಮೂಲ ಸಂರಕ್ಷಣೆ ಹಾಗೂ ಸಾರ್ವಜನಿಕ ಹೊಣೆಗಾರಿಕೆಯ ಮನವರಿಕೆಯನ್ನು ಒತ್ತಿಹೇಳುವ ಸಾಮಾಜಿಕ ಮತ್ತು ಆಡಳಿತಾತ್ಮಕ ಮೌಲ್ಯಗಳಿಗೆ ಸ್ಮರಣಿಕೆ, ಟ್ರೋಫಿ ನೀಡುವ ಪದ್ಧತಿಯು ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿದೆ.

ಸಸಿಗಳು, ಪುಸ್ತಕಗಳು, ಕೈ ಮಗ್ಗ ಉತ್ಪನ್ನಗಳು ಅಥವಾ ಸ್ಥಳೀಯವಾಗಿ ರಚಿಸಲಾದ ಪರಿಸರ ಸ್ನೇಹಿ ಸ್ಮರಣಿಕೆಗಳಂತಹ ಸಾಂಕೇತಿಕ ಪರ್ಯಾಯಗಳು ಸುಸ್ಥಿರ ಆಡಳಿತ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗೆ ರಾಜ್ಯದ ಬದ್ಧತೆಯನ್ನು ಪ್ರತಿಬಿಂಬಿಸುವಲ್ಲಿ ಉತ್ತಮ ಆಯ್ಕೆಯಾಗಿರುತ್ತವೆ ಎಂದು ಸರಕಾರ ಹೇಳಿದೆ.

ಹೀಗಾಗಿ ಎಲ್ಲ ಇಲಾಖೆ, ನಿಗಮ ಮತ್ತು ಮಂಡಳಿ ಹಾಗೂ ಜಿಲ್ಲಾಡಳಿತಗಳಿಗೆ ಸೂಚಿಸಿದೆ ಹಾಗೂ ಅವುಗಳ ಬದಲಿಗೆ ಗಣ್ಯರು/ಅತಿಥಿಗಳಿಗೆ ಪರಿಸರ ಪ್ರಜ್ಞೆಯ ತತ್ತ್ವಗಳಿಗೆ ಅನುಗುಣವಾಗಿ ಸದ್ಭಾವನೆ ಮತ್ತು ಸುಸ್ಥಿರತೆಯನ್ನು ಪ್ರೋತ್ಸಾಹಿಸುವಂತಹ ಪರಿಸರ ಪರ್ಯಾಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದು ಉದ್ಘಾಟನೆಗಳು, ಶಿಲಾನ್ಯಾಸಗಳು, ಸಮ್ಮೇಳನಗಳು, ಕಾರ್ಯಾಗಾರಗಳು, ಸನ್ಮಾನ ಕಾರ್ಯಕ್ರಮಗಳು, ಸಾರ್ವಜನಿಕ ಸಭೆ ಮತ್ತು ಸಮಾರಂಭಗಳು ಮತ್ತು ರಾಜ್ಯ ಭೇಟಿಗಳಂತಹ ಎಲ್ಲ ಅಧಿಕೃತ ಚಟುವಟಿಕೆಗಳಿಗೆ ಅನ್ವಯಿಸುತ್ತದೆ. ಆದರೆ ಅಧಿಕೃತ ರಾಜ್ಯ ಕ್ರೀಡಾ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹ ಟ್ರೋಫಿಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News