×
Ad

117 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್‌ಗೆ ಸಂಪುಟ ಅಸ್ತು : ಡಿ.ಕೆ.ಶಿವಕುಮಾರ್

2 ವರ್ಷಗಳಲ್ಲಿ ಯೋಜನೆ ಜಾರಿ, ಶೇ.40ರಷ್ಟು ಸಂಚಾರ ದಟ್ಟಣೆ ನಿಯಂತ್ರಣ

Update: 2025-10-16 21:45 IST

ಬೆಂಗಳೂರು, ಅ.16 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಮೂಲಕ 117 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ (ಈ ಹಿಂದಿನ ಪೆರಿಫೆರಲ್ ರಿಂಗ್ ರಸ್ತೆ)ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಭೂಸಂತ್ರಸ್ತ ರೈತರಿಗೆ ಪರಿಹಾರ ಪಡೆಯಲು ನಾಲ್ಕು ಆಯ್ಕೆಗಳನ್ನು ಕಲ್ಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದಿನ ಸರಕಾರ ಉದ್ದೇಶಿಸಿದ್ದ ಪೆರಿಫೆರಲ್ ರಿಂಗ್ ರಸ್ತೆಯನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂದು ಮರುನಾಮಕರಣ ಮಾಡಿ 117 ಕಿ.ಮೀ ಉದ್ದದ ರಸ್ತೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ತುಮಕೂರು ರಸ್ತೆಯಿಂದ ಯಲಹಂಕ, ಎಲೆಕ್ಟ್ರಾನಿಕ್ ಸಿಟಿ ಮೂಲಕ ಮೈಸೂರು ರಸ್ತೆವರೆಗೂ ಈ ರಸ್ತೆ ಸಾಗಲಿದೆ. ಈ ರಸ್ತೆಯು ಬೆಂಗಳೂರಿನ ಉತ್ತರ ಭಾಗದಲ್ಲಿ 73 ಕಿ.ಮೀ ಸಾಗಲಿದ್ದು, ಉಳಿದದ್ದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಾಗಲಿದೆ. ಈ ಹಿಂದಿನ ಸರಕಾರ ಈ ಯೋಜನೆಗೆ ಅಧಿಸೂಚನೆ ಹೊರಡಿಸಿತ್ತು. ಬೆಂಗಳೂರಿನಲ್ಲಿ ನೈಸ್ ರಸ್ತೆಗೆ ಪರ್ಯಾಯ ರಸ್ತೆ ಅಗತ್ಯವಿದೆ. ಯಾವುದೇ ಕಾರಣಕ್ಕೂ ಡಿನೋಟಿಫಿಕೇಶನ್ ಮಾಡಬಾರದು ಎಂದು ಈ ಯೋಜನೆ ಕೈಗೊತ್ತಿಕೊಂಡಿದ್ದು, ಸರಕಾರದ ಖಾತರಿಯೊಂದಿಗೆ ಹುಡ್ಕೋ ಮೂಲಕ 27 ಸಾವಿರ ಕೋಟಿ ರೂ.ಸಾಲ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ಈ ಯೋಜನೆಗಾಗಿ 100 ಮೀಟರ್ ಅಗಲ ಜಾಗಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಸರಕಾರ ಬೆಂಗಳೂರು ಮೈಸೂರು ಹೆದ್ದಾರಿ ಗಾತ್ರ (65 ಮೀ.)ದಲ್ಲೆ ಈ ರಸ್ತೆ ಮಾಡಲು ತೀರ್ಮಾನಿಸಿದೆ. ರಸ್ತೆಯ ಎರಡೂ ಭಾಗದಲ್ಲಿ ಸರ್ವೀಸ್ ರಸ್ತೆ ಇರಲಿದ್ದು, ಪ್ರಮುಖ ರಸ್ತೆ ಟೋಲ್ ರಸ್ತೆಯಾಗಲಿದೆ. ಈ ರಸ್ತೆಯ ಮಧ್ಯೆ ಮೆಟ್ರೋ ಯೋಜನೆ ರೂಪಿಸಲು ಜಾಗ (5 ಮೀ.) ಕಲ್ಪಿಸಲಾಗುವುದು. ಉಳಿದ 35 ಮೀ. ಜಾಗವನ್ನು ರೈತರಿಗೆ ಪರಿಹಾರ ರೂಪದಲ್ಲಿ ಮರಳಿ ನೀಡಲು ತೀರ್ಮಾನಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಈ ಜಾಗವನ್ನು ಹರಾಜು ಹಾಕಬೇಕು ಎಂಬ ಸಲಹೆಗಳು ಬಂದಿತ್ತಾದರೂ ರೈತರಿಗೆ ನೀಡಲು ನಿರ್ಧರಿಸಿದ್ದೇವೆ. ಇದು ವಾಣಿಜ್ಯ ಉದ್ದೇಶಕ್ಕೆ ನೆರವಾಗಲಿರುವ ಹಿನ್ನೆಲೆಯಲ್ಲಿ ರೈತರ ಮನವಿ ಮೇರೆಗೆ ಜಾಗವನ್ನು ಅವರಿಗೆ ನೀಡುವ ತೀರ್ಮಾನ ಮಾಡಲಾಗಿದೆ. ಸರಕಾರ ಹಾಗೂ ಬಿಡಿಎ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನಾಲ್ಕು ರೀತಿಯಲ್ಲಿ ಪರಿಹಾರ ನೀಡಲು ಸರಕಾರ ಮುಂದಾಗಿದೆ ಎಂದು ಅವರು ಹೇಳಿದರು.

ಮಾರ್ಗಸೂಚಿ ದರದಲ್ಲಿ ನಗರ ಭಾಗದಲ್ಲಿ ಎರಡು ಪಟ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂರುಪಟ್ಟು ನಗದು ಪರಿಹಾರ ಅಥವಾ ಟಿಡಿಆರ್ ಅಥವಾ ಎಫ್‍ಎಆರ್ ಅಥವಾ ಶೇ.35ರಷ್ಟು ವಾಣಿಜ್ಯ ಭೂಮಿಯನ್ನು ಪಡೆಯುವ ಅವಕಾಶವನ್ನು ನೀಡಲಾಗಿದೆ. ಒಂದು ವೇಳೆ ವಾಣಿಜ್ಯ ಭೂಮಿ ಬೇಡ ವಸತಿ ಪ್ರದೇಶದಲ್ಲಿ ಜಾಗ ಬೇಕು ಎಂದರೆ ಬಿಡಿಎ ವತಿಯಿಂದ ರೂಪಿಸಲಾಗಿರುವ ನೂತನ ಬಡಾವಣೆಗಳಲ್ಲಿ ಶೇ.40ರಷ್ಟು ಜಾಗ ನೀಡಲಾಗುವುದು. ಬಿಡಿಎ ಕಾಯ್ದೆಯಲ್ಲಿ ಹೊಸ ಕಾಯ್ದೆ ಅನುಸಾರ ಹೆಚ್ಚಿನ ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ರೈತರಿಗೆ ನೆರವಾಗಲು ಸರಕಾರ ಮಹತ್ವದ ತೀರ್ಮಾನ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

ಎರಡು ವರ್ಷಗಳಲ್ಲಿ ಯೋಜನೆ ಪೂರ್ಣ: ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು. ಸರಕಾರದ ಈ ತೀರ್ಮಾನಕ್ಕಾಗಿ ರೈತರು ಕಾತುರರಾಗಿದ್ದರು. ಒಂದು ವೇಳೆ ಯಾರಾದರೂ ಭೂಮಿ ನೀಡಲು ನಿರಾಕರಿಸಿದರೆ, ನಾವು ಸಹಜ ಸ್ವಾಧೀನ ಪ್ರಕ್ರಿಯೆ ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟು ಯೋಜನೆ ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ಡಿನೋಟಿಫಿಕೇಶನ್ ಮಾಡುವುದಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ಸಂಚಾರ ದಟ್ಟಣೆಯಿಂದ ಬೆಂಗಳೂರಿನಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದ್ದು, ಈ ಯೋಜನೆ ಅಗತ್ಯವಾಗಿದೆ. ಈ ಯೋಜನೆಯಿಂದ 1900 ಕುಟುಂಬಗಳಿಗೆ ಪರಿಣಾಮ ಬೀರುತ್ತದೆಯಾದರೂ ಬೆಂಗಳೂರು ನಗರಕ್ಕೆ ದೊಡ್ಡ ಮಟ್ಟದ ನಿರಾಳತೆ ನೀಡಲಿದೆ. ಟಿಡಿಆರ್ ವಿನಿಮಯ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದೇನೆ. ಈ ಪ್ರಕ್ರಿಯೆ ಸುಗಮವಾಗಿ ಆಸ್ತಿಗಳ ವಿನಿಮಯ ಮಾಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ಭೂಮಿ ಕಳೆದುಕೊಳ್ಳುವವರು ನೋಂದಣಿ ಮಾಡಿಕೊಂಡು, ಈ ಟಿಡಿಆರ್ ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಈ ಹಿಂದೆ ಈ ಯೋಜನೆಗೆ 27 ಸಾವಿರ ಕೋಟಿ ರೂ.ಅಂದಾಜು ಮಾಡಲಾಗಿತ್ತು. ಈಗ ರೂಪಿಸಿರುವ ಯೋಜನೆ ಮೂಲಕ ಹೆಚ್ಚಿನ ರೈತರು ಜಮೀನನ್ನೆ ಆಯ್ಕೆ ಮಾಡಿಕೊಳ್ಳುವುದರಿಂದ ಸುಮಾರು 10 ಸಾವಿರ ಕೋಟಿ ರೂ.ಗಳಿಗಿಂತ ಕಡಿಮೆ ವೆಚ್ಚವಾಗಲಿದೆ. ಬೆಂಗಳೂರಿನಲ್ಲಿ ಶೇ.40ರಷ್ಟು ಸಂಚಾರ ದಟ್ಟಣೆ ತಗ್ಗಲಿದೆ. ಎಲೆಕ್ಟ್ರಾನಿಕ್ ಸಿಟಿ, ತುಮಕೂರು ರಸ್ತೆ, ನೆಲಮಂಗಲ, ಮೈಸೂರು ರಸ್ತೆ ಕಡೆ ಹೋಗುವ ವಾಹನಗಳು ಈ ರಸ್ತೆಯಲ್ಲಿ ಸಾಗಲಿವೆ ಎಂದು ಅವರು ತಿಳಿಸಿದರು.

ಈ ಯೋಜನೆಗೆ ಎಷ್ಟು ಎಕರೆ ಬಳಕೆಯಾಗುತ್ತಿದೆ, ಇದಕ್ಕೆ ಹೊಸದಾಗಿ ಅಧಿಸೂಚನೆ ಹೊರಡಿಸಲಾಗುವುದೆ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, 2007ರಲ್ಲೆ ಅಧಿಸೂಚನೆ ಆಗಿದೆ. ಈ ಯೋಜನೆಯಲ್ಲಿ ಉತ್ತರ ಭಾಗದಲ್ಲಿ 1800 ಎಕರೆ, ದಕ್ಷಿಣ ಭಾಗದಲ್ಲಿ ಕೆಲವು ವಸತಿ ಪ್ರದೇಶಗಳನ್ನು ಸೇರಿಸಿದ್ದೇವೆ. ಅನೇಕ ರೈತರು, ಕೆಲವು ವಿರೋಧ ಪಕ್ಷಗಳ ಶಾಸಕರು ಕೂಡ ಇದು ಅತ್ಯುತ್ತಮ ಯೋಜನೆಯಾಗಿದೆ ಎಂದು ನನ್ನ ಬಳಿ ಹೇಳಿದ್ದಾರೆ ಎಂದರು.

ಪರಿಹಾರದಲ್ಲಿ ರೈತರಿಗೆ ಒಂದು ಆಯ್ಕೆ ಮಾತ್ರ ಮಾಡಬೇಕಾ ಅಥವಾ ಬಹು ಆಯ್ಕೆ ಮಾಡುವ ಅವಕಾಶವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 20 ಗುಂಟೆಗಿಂತ ಒಳಗಿರುವವರಿಗೆ ನಗದು ಪರಿಹಾರ ಮಾತ್ರ ನೀಡಲಾಗುವುದು. ಅದಕ್ಕಿಂತ ಹೆಚ್ಚಿನ ಭೂಮಿ ಕಳೆದುಕೊಳ್ಳುವವರಿಗೆ ಈ ಆಯ್ಕೆಗಳನ್ನು ನೀಡಲಾಗಿದ್ದು, ಯಾವುದಾದರೂ ಒಂದು ಆಯ್ಕೆಯನ್ನು ಆರಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.

ಈ ಯೋಜನೆ 2 ದಶಕಗಳ ಕಾಲ ನೆನೆಗುದಿಗೆ ಬೀಳಲು ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಈ ಹಿಂದಿನ ಸರಕಾರಗಳಲ್ಲಿ ಯಾರೂ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿಲ್ಲ. ನಾನು ಸಚಿವನಾಗಿದ್ದರೂ ಈ ಯೋಜನೆಗೆ ಹಿರಿಯ ಐಎಎಸ್ ಅಧಿಕಾರಿಯಾಗಿದ್ದ ಎಲ್.ಕೆ.ಅತೀಕ್ ಅವರಿಗೆ ಜವಾಬ್ದಾರಿ ನೀಡಿದೆ. ಈ ಯೋಜನೆ ತ್ವರಿತವಾಗಿ ನಡೆಯಬೇಕು, ಇದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸಬೇಕು ಎಂದು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಬಿ ಖಾತಾಗಳನ್ನು ಎ ಖಾತಾವಾಗಿ ಪರಿವರ್ತಿಸುವುದರಲ್ಲಿ 15 ಸಾವಿರ ಕೋಟಿ ರೂ. ಲೂಟಿ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಬಹಳ ಸಂತೋಷ. ಅವರ ಬಳಿ ಇರುವ ತನಿಖಾ ತಂಡವನ್ನು ಹಾಕಲಿ. ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ, ನನ್ನ ವಿರುದ್ಧ ಅನೇಕ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News