ಬೆಂಗಳೂರು | ಡಿಜಿಟಲ್ ಅರೆಸ್ಟ್; ವೃದ್ಧನಿಂದ 1.77 ಕೋಟಿ ರೂ. ವರ್ಗಾಯಿಸಿಕೊಂಡು ವಂಚನೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ವೃದ್ಧನನ್ನು ಡಿಜಿಟಲ್ ಬಂಧನದಲ್ಲಿಟ್ಟ ಸೈಬರ್ ವಂಚಕರು 1.77 ಕೋಟಿ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸದಾನಂದನಗರದ ಎನ್‍ಜಿಇಎಫ್ ಲೇಔಟ್ ನಿವಾಸಿ ಜಿ.ವಸಂತ ಕುಮಾರ್(81) ಸೈಬರ್ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಅವರು ನೀಡಿದ ದೂರಿನನ್ವಯ ನಗರದ ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಜುಲೈ 23ರಂದು ಪ್ರಕರಣ ದಾಖಲಾಗಿದೆ.
ಮುಂಬೈನ ಕೊಲಾಬಾ ಪೊಲೀಸರ ಹೆಸರಿನಲ್ಲಿ ಜುಲೈ 5ರಂದು ಕರೆ ಮಾಡಿದ್ದ ಸಂದೀಪ್ ಜಾಧವ್ ಎಂಬಾತ, ತಮ್ಮ ಆಧಾರ್ ನಂಬರ್‍ನಿಂದ ಜೆಟ್ ಏರ್‌ವೇಸ್ ಸಂಸ್ಥೆಯ ನರೇಶ್ ಗೋಯಲ್ ಎಂಬವರ ಹೆಸರಿಗೆ ಕೋಟ್ಯಂತರ ರೂ. ವರ್ಗಾವಣೆಯಾಗಿದೆ ಎಂದು ಬೆದರಿಸಿದ್ದಾನೆ. ಜುಲೈ 9ರಿಂದ ಜು.15ರವರೆಗೆ ಡಿಜಿಟಲ್ ಅರೆಸ್ಟ್ ಮಾಡಿದ್ದ ವಂಚಕ, ವಿಡಿಯೋ ಕರೆ ಮೂಲಕ ವಾಟ್ಸ್ ಆ್ಯಪ್‍ನಲ್ಲಿ ನಕಲಿ ಬಂಧನದ ವಾರಂಟ್ ತೋರಿಸಿ ಆತಂಕ ಹುಟ್ಟಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳು ಮುಂಬೈ ಪೊಲೀಸರೆಂದು ನಂಬಿದ್ದ ವಸಂತ ಕುಮಾರ್, ಅವರು ಸೂಚಿಸಿದ ರೀತಿಯಲ್ಲಿ ತಮ್ಮ ಐದು ಬ್ಯಾಂಕ್ ಖಾತೆಯ ವಿವರಣೆ ನೀಡಿದ್ದಾರೆ. ಖಾತೆಯಲ್ಲಿರುವ ಹಣವನ್ನು ಬೇರೊಂದು ಖಾತೆಗೆ ಸುರಕ್ಷಿತವಾಗಿಟ್ಟುಕೊಂಡು ತನಿಖೆ ನಡೆಸಬೇಕಾಗಿದೆ. ನಂತರ ನಿಮ್ಮ ಹಣವನ್ನು ಆಯಾ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ. ವಂಚಕರ ಅಣತಿಯಂತೆ ತಮ್ಮ ವಿವಿಧ ಬ್ಯಾಂಕ್ ಖಾತೆಯಲಿದ್ದ 1.77 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹಣ ವರ್ಗಾವಣೆ ಬಳಿಕ ಕರೆ ಕಡಿತಗೊಳಿಸಿದ್ದಾರೆ. ವಿಚಾರಣೆ ಮುಗಿದ ಬಳಿಕ ಮರಳಿ ತಮ್ಮ ಖಾತೆಗೆ ಹಣ ವರ್ಗಾವಣೆಯಾಗದೆ ಇದ್ದಾಗ, ತಾನು ವಂಚನೆಗೆ ಒಳಗಾಗಿರುವುದು ಮನವರಿಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.