ಬೆಂಗಳೂರು | ಆಟಿಕೆ ಗನ್ ತೋರಿಸಿ 16 ಸೆಕೆಂಡ್‍ಗಳಲ್ಲಿ ಚಿನ್ನದಂಗಡಿ ದರೋಡೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಆಟಿಕೆ ಗನ್ ತೋರಿಸಿ ಮಾಲಕನನ್ನು ಹೆದರಿಸಿ ಆರೋಪಿಗಳು ಕೇವಲ 16 ಸೆಕೆಂಡ್‍ಗಳಲ್ಲಿ ಚಿನ್ನದಂಗಡಿ ದರೋಡೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೋಹಳ್ಳಿ ಗೇಟ್ ಬಳಿ ನಡೆದಿದೆ.
ರಾಮ್ ಜ್ಯುವೆಲರ್ಸ್ ಹೆಸರಿನ ಚಿನ್ನದಂಗಡಿಯಲ್ಲಿ ಜುಲೈ 24ರಂದು ರಾತ್ರಿ 8 ರಿಂದ 9 ಗಂಟೆಯೊಳಗೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳು ಕೃತ್ಯ ಎಸಗಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಜು.24ರಂದು ರಾಮ್ ಜ್ಯುವೆಲರ್ಸ್‍ಗೆ ಆಟಿಕೆ ಗನ್ ಹಿಡಿದು ನುಗ್ಗಿದ ಮೂವರು ಆರೋಪಿಗಳು ಟೇಬಲ್ ಮೇಲಿದ್ದ ಚಿನ್ನವನ್ನು ಬಾಚಿಕೊಂಡು, ಅಂಗಡಿ ಮಾಲಕ ಮತ್ತು ಸಿಬ್ಬಂದಿಯನ್ನು ತಳ್ಳಿ ಪರಾರಿಯಾಗಿದ್ದಾರೆ. ಕೂಗಾಟ ಕೇಳಿ ಪಕ್ಕದ ಅಂಗಡಿಯ ಹುಡುಗ ಬಂದಿದ್ದು, ಆತನನ್ನೂ ತಳ್ಳಿ, ಚಾಕುವಿನಲ್ಲಿ ಗಾಯ ಮಾಡಿ, ಸಿಕ್ಕ ಚಿನ್ನವನ್ನು ದೋಚಿ ಮೂವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಡಿವೈಎಸ್ಪಿ, ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳಿಂದ ತನಿಖೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಜು.24ರಂದು ರಾತ್ರಿ ಅಂಗಡಿಯನ್ನು ಮುಚ್ಚುವ ವೇಳೆ ಏಕಾಏಕಿ ನುಗ್ಗಿದ್ದ ಮೂವರು ಮುಸುಕುಧಾರಿಗಳು ಟಾಯ್ ಗನ್ ತೋರಿಸಿ ಅಂಗಡಿ ಮಾಲಕನನ್ನು ಹೆದರಿಸಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಆಭರಣಗಳ ಬಾಕ್ಸ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೇವಲ 16 ಸೆಕೆಂಡ್‍ಗಳಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಒಟ್ಟು 184 ಗ್ರಾಂ ಚಿನ್ನಾಭರಣವನ್ನು ದರೋಡೆ ಮಾಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.