ʼಅಸಮರ್ಪಕ ಸುರಕ್ಷಾ ವ್ಯವಸ್ಥೆಗಾಗಿ ಸರಕಾರ ಹೊಣೆ ಹೊರಲೇಬೇಕುʼ: ಬೆಂಗಳೂರು ಕಾಲ್ತುಳಿತ ಘಟನೆಗೆ ನಟ ಕಿಶೋರ್ ಕುಮಾರ್ ಪ್ರತಿಕ್ರಿಯೆ
ನಟ ಕಿಶೋರ್ ಕುಮಾರ್
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 13 ವರ್ಷದ ಬಾಲಕಿ ಸಹಿತ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದು, 50ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು ಬೆಂಗಳೂರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ನಟ ಕಿಶೋರ್ ಕುಮಾರ್ ಅವರು, "ನಾವೆಲ್ಲರೂ ಜವಾಬ್ದಾರರು. ಈ ಅದ್ಭುತ ವಿಜಯವನ್ನು ಈಗ ಈ ದುರಂತಕ್ಕಾಗಿ ಮಾತ್ರ ನೆನಪಿಸಿಕೊಳ್ಳಲಾಗುತ್ತದೆ ಎಂಬುದು ನಿಜಕ್ಕೂ ದುಃಖಕರ. ಅಗಲಿದವರು ಮತ್ತೆ ಬರಲು ಸಾಧ್ಯವಿಲ್ಲ. ಅವರ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಶಾಶ್ವತವಾಗಿ ಕಳೆದುಕೊಂಡಿವೆ. ಅವರ ನಷ್ಟವನ್ನು ತುಂಬಲು ಅಥವಾ ವಿವರಿಸಲು ಯಾವ ಪದಗಳಿಂದಲೂ ಸಾಧ್ಯವಿಲ್ಲ" ಎಂದು ಘಟನೆಯ ಬಗ್ಗೆ ಬೇಸರ ಹೊರಹಾಕಿದ್ದಾರೆ.
"ಅಸಮರ್ಪಕ ಸುರಕ್ಷಾ ವ್ಯವಸ್ಥೆಗಾಗಿ ಸರಕಾರ ಹೊಣೆ ಹೊರಲೇಬೇಕು. ಇದು ಸರಕಾರದ, ಆಯೋಜಕರ, ಪೋಲೀಸರ, ಕ್ರಿಕೆಟ್ ಮಂಡಳಿಯ ವೈಫಲ್ಯ. ಮೃತರ ಸಂಖ್ಯೆಯನ್ನೂ ಮುಚ್ಚಿಟ್ಟ ಮಹಾಕುಂಭ ದುರಂತದ ಅಥವಾ ದೆಹಲಿ ರೈಲ್ವೆ ನಿಲ್ದಾಣ ಅಥವಾ ಮೋರ್ಬಿ ಸೇತುವೆ ದುರಂತದ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ ಇಲ್ಲಿ ಸತ್ಯವನ್ನು ಇತರ ಸ್ಥಳಗಳಂತೆ ಮರೆಮಾಚಲಾಗುತ್ತಿಲ್ಲ ಎಂದು ಸಮಾಧಾನ ಪಡಬಹುದೇನೋ" ಎಂದು ಹೇಳಿದ್ದಾರೆ.
ಆದರೆ, ಕ್ರಿಕೆಟ್ ಅನ್ನು ನಮ್ಮ ಧರ್ಮವೆಂದು ಪರಿಗಣಿಸುವ ನಾವು, ನಮ್ಮ ಸೆಲೆಬ್ರಿಟಿಗಳನ್ನು ದೇವತೆಗಳನ್ನಾಗಿ ಮಾಡಿ, ನಮ್ಮ ಕ್ರಿಕೆಟ್, ಚಲನಚಿತ್ರ ಮತ್ತು ರಾಜಕೀಯ ನಾಯಕರ ಮೇಲಿನ ಪ್ರೀತಿಯಲ್ಲಿ ಕುರುಡರಾದ ನಾವು, ಕನಿಷ್ಟ ನಾಗರಿಕ ಪ್ರಜ್ಞೆಯೂ ಇಲ್ಲದ ನಾವು, ಜವಾಬ್ದಾರರಲ್ಲವೇ ??. ಇಂದು ನಮ್ಮನ್ನು ನಾವು ಒಂದು ಬಹು ಮುಖ್ಯ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ಕ್ರೀಡೆ, ರಾಷ್ಟ್ರೀಯತೆ, ಧರ್ಮದಿಂದ ಹಿಡಿದು ಭಾಷೆ ಮತ್ತು ಜಾತಿಯವರೆಗೆ ಎಲ್ಲದರಲ್ಲೂ ನಾವು ಅತಿ ಭಾವುಕರಾಗುತ್ತಿಲ್ಲವೇ? ಈ ಅತಿ ಭಾವುಕತೆಯ ಪ್ರಯೋಜನ ಪಡೆಯುತ್ತಿರುವವರಾರು? ಬೆಲೆ ತೆರುತ್ತಿರುವವರು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.