ಬೆಂಗಳೂರು| ‘ಆನ್‍ಲೈನ್ ಜೂಜು’ ಸಾಲ ತೀರಿಸಲು ಎಳನೀರು ಕಳ್ಳತನ: ಆರೋಪಿ ಸೆರೆ
ಬೆಂಗಳೂರು: ಆನ್‍ಲೈನ್ ಜೂಜಾಟದಿಂದ ಆದ ಸಾಲ ತೀರಿಸುವುದಕ್ಕಾಗಿ ನಗರದಲ್ಲಿ ಎಳನೀರು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಇಲ್ಲಿನ ಗಿರಿನಗರ ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ತಮಿಳುನಾಡು ಮೂಲದ ಮೋಹನ್ ಎಂಬಾತ ಬಂಧಿತ ಆರೋಪಿ. ಮಡಿವಾಳದಲ್ಲಿ ವಾಸವಿದ್ದ ಮೋಹನ್ ಈ ಹಿಂದೆ ಎಳನೀರು ವ್ಯಾಪಾರ ಮಾಡಿಕೊಂಡಿದ್ದ. ಬಿಡುವಿನ ವೇಳೆಯಲ್ಲಿ ಆನ್‍ಲೈನ್ ಜೂಜು ಆಡುತ್ತಾ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ನಂತರ ಎಳನೀರು ಮಾರುವುದನ್ನು ನಿಲ್ಲಿಸಿ, ಬಾಡಿಗೆ ಕಾರು ಪಡೆದು ಓಡಿಸುವ ಕೆಲಸ ಮಾಡಿಕೊಂಡಿದ್ದ. ಸಾಲ ಹೆಚ್ಚಾದ್ದರಿಂದ ಎಳನೀರು ಕಳ್ಳತನಕ್ಕೆ ಸಂಚು ರೂಪಿಸಿದ್ದ ಆರೋಪಿ ಪ್ರತಿದಿನ ಬಾಡಿಗೆ ಕಾರನ್ನು ಬಳಸಿಕೊಂಡು ಕಳ್ಳತನ ಮಾಡುತ್ತಿದ್ದನು.
ರಸ್ತೆ ಬದಿಯಲ್ಲಿರುವ ಅಂಗಡಿಗಳಿಂದ ರಾತ್ರಿ ವೇಳೆ ಎಳನೀರು ಕಳ್ಳತನ ಮಾಡಿ ಮತ್ತೊಬ್ಬ ವ್ಯಾಪಾರಿಗೆ ಮದ್ದೂರು ಎಳನೀರು ಎಂದು ಮಾರಾಟ ಮಾಡುತ್ತಿದ್ದ. ಮೂರು ತಿಂಗಳಿನಿಂದ ಪ್ರತಿನಿತ್ಯ ನೂರರಿಂದ ನೂರೈವತ್ತು ಎಳನೀರು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿ, ಗಿರಿನಗರದ ಮಂಕುತಿಮ್ಮ ಪಾರ್ಕ್ ಬಳಿ ಇತ್ತೀಚಿಗೆ ರಾಜಣ್ಣ ಎಂಬವರ ಅಂಗಡಿಯಿಂದ ಸುಮಾರು ಒಂದು ಸಾವಿರದಷ್ಟು ಎಳನೀರು ಕಳ್ಳತನ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರು, ಆರೋಪಿ ಮೋಹನ್‍ನನ್ನು ಬಂಧಿಸಿದ್ದು, ಆರೋಪಿಯಿಂದ ಎಳನೀರು ಸೇರಿದಂತೆ ಎಂಟು ಲಕ್ಷ ರೂ. ಮೌಲ್ಯದ ಒಂದು ಕಾರು, ರಾಯಲ್ ಎನ್ ಫೀಲ್ಡ್ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.