ಬೆಂಗಳೂರು | ಕೋರ್ಟ್ ಆವರಣದಲ್ಲಿನ ಕಚೇರಿಯಿಂದಲೇ ನಗದು, ದಾಖಲಾತಿ ಕಳವು: ಪ್ರಕರಣ ದಾಖಲು
ಬೆಂಗಳೂರು, ಅ.28: ನಗರದ ನೃಪತುಂಗ ರಸ್ತೆಯಲ್ಲಿರುವ ಎಸಿಎಂಎಂ ಕೋರ್ಟ್ ಕಾಂಪ್ಲೆಕ್ಸ್ ಆವರಣದಲ್ಲಿರುವ ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ನಗದು ಮತ್ತು ದಾಖಲಾತಿಗಳನ್ನು ಕಳವು ಮಾಡಿ ಪರಾರಿಯಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.21ರಂದು ಸಂಜೆ 6:30ರ ಸುಮಾರಿಗೆ ಅಂಚೆ ಕಚೇರಿಯ ಬೀಗ ಹಾಕಿಕೊಂಡು ತೆರಳಲಾಗಿತ್ತು. ಮರು ದಿನ ರವಿವಾರವಾದ್ದರಿಂದ ಅ.23ರಂದು ಅಂಚೆ ಕಚೇರಿ ಬಾಗಿಲು ತೆರೆದಾಗ ಕಚೇರಿಯ ಹಿಂಭಾಗದ ಕಿಟಕಿಯ ಗ್ರಿಲ್ ಕತ್ತರಿಸಿ ಅಲ್ಮೆರಾದಲ್ಲಿರುವ ಲಾಕರ್ ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ.
ಲಾಕರ್‍ನಲ್ಲಿದ್ದ 10 ಸಾವಿರ ರೂ. ನಗದು ಹಾಗೂ ಕೆಲವು ದಾಖಲಾತಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚುವಂತೆ ಕಚೇರಿಯ ಪೋಸ್ಟ್ ಮಾಸ್ಟರ್ ಲಕ್ಷ್ಮಿ ಜೆ. ಎಂಬುವವರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.