88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ
ಬಾನು ಮುಷ್ತಾಕ್ Photo : AP
ಬಳ್ಳಾರಿ : ಬಳ್ಳಾರಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ 88ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯನ್ನಾಗಿ ಬೂಕರ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹಾಗೂ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಪ್ರಕಟಿಸಿದ್ದಾರೆ.
ರವಿವಾರ ಬಳ್ಳಾರಿಯ ಖಾಸಗಿ ಹೊಟೇಲ್‍ನಲ್ಲಿ ನಡೆದ ಕಸಾಪ ಕಾರ್ಯಕಾರಿ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿಯ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದು, ಕನ್ನಡ ಭಾಷೆಯ ಸಾಮರ್ಥ್ಯ ಹಾಗೂ ಶಕ್ತಿಯನ್ನು ಜಗತ್ತಿಗೆ ತೋರಿಸಿದ, ಕನ್ನಡಿಗರಲ್ಲಿ ಹೊಸ ಅಭಿಮಾನವನ್ನು ಮೂಡಿಸಿ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಹೊಸ ಅರ್ಥ ತಂದವರು ಬಾನು ಮುಷ್ತಾಕ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಸಮಿತಿಯು ಲೇಖಕಿ ಬಾನು ಮುಷ್ತಾಕ್ ಅವರನ್ನು ಸರ್ವಾನುಮತದಿಂದ 88ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಈ ಆಯ್ಕೆಯನ್ನು ಸಾಹಿತಿ ಬಾನು ಮುಷ್ತಾಕ್ ಅವರು ಅತ್ಯಂತ ಸಂತೋಷದಿಂದ ಒಪ್ಪಿ, ಕನ್ನಡದ ಕೆಲಸ ನನ್ನ ಮೊದಲ ಕರ್ತವ್ಯವೆಂದು ಹೇಳಿದ್ದಾರೆ ಎಂದು ಮಹೇಶ್ ಜೋಶಿ ತಿಳಿಸಿದರು.
ಬಾನು ಮುಷ್ತಾಕ್ ಅವರು ಲೇಖಕಿಯಾಗಿ ತನ್ನ ಸಮುದಾಯದ ಒಳಗಿನ ಕಟ್ಟುಪಾಡುಗಳನ್ನು ಹಾಗೂ ಸಮಾಜದಲ್ಲಿ ಎದ್ದು ಕಾಣುವ ಅಹಿಷ್ಣುತೆಯನ್ನು ಸವಾಲಾಗಿ ಸ್ವೀಕರಿಸಿ, ತಾಳ್ಮೆಯಿಂದ ಹೊಸ ಬದುಕು ಕಟ್ಟಿಕೊಂಡರು. ‘ಎದೆಯ ಹಣತೆ’ಯು ಮುಸುಕಿನ ಮಬ್ಬಿನಲ್ಲಿ ಕೈ ಹಿಡಿದು ನಡೆಸಬಲ್ಲ ಮಾನವೀಯ ಶಕ್ತಿಯನ್ನು ಹೊಂದಿದೆ. ಹಾಗೆಯೇ ‘ಹಾರ್ಟ್ ಲ್ಯಾಂಪ್’ ಜಗತ್ತಿನ ಹೃದಯಗಳಿಗೆ ಎಲ್ಲೆಡೆ ಕನ್ನಡದ ಬೆಳಕನ್ನು ಹಬ್ಬಿಸಿದೆ ಎಂದು ಜೋಶಿ ಬಣ್ಣಿಸಿದರು.
ದೀಪಾ ಬಾಸ್ತಿ ಅವರಿಗೆ ವಿಶೇಷ ಗೌರವ: ‘ಎದೆಯ ಹಣತೆ’ ಕೃತಿಯನ್ನು ಅನುವಾದ ಮಾಡುವ ಮೂಲಕ ಕನ್ನಡ ಸಾಹಿತ್ಯದ ಸಾಧನೆಯನ್ನು ಜಗತ್ತಿಗೆ ಗೊತ್ತಾಗುವಲ್ಲಿ ಪ್ರದಾನ ಪಾತ್ರವಹಿಸಿದ ಲೇಖಕಿ ದೀಪಾ ಭಾಸ್ತಿ ಅವರಿಗೂ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲು ಕಸಾಪ ಕಾರ್ಯಕಾರಿ ಸಮಿತಿ ನಿರ್ಣಯಿಸಿದೆ’ ಎಂದು ಅಧ್ಯಕ್ಷ ಡಾ.ಮಹೇಶ್ ಜೋಶಿ ತಿಳಿಸಿದರು.