ಕಾಲ್ತುಳಿತ ಪ್ರಕರಣ : ನಾಳೆ ವಿಚಾರಣೆಗೆ ಹಾಜರಾಗಲು ಬಿ.ದಯಾನಂದ್‍ಗೆ ನೋಟಿಸ್
ಬಿ.ದಯಾನಂದ್
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ಚುರುಕುಗೊಂಡಿದ್ದು, ಮಾಜಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ನಾಳೆ(ಜೂ.13) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಈಗಾಗಲೇ ಈ ಪ್ರಕರಣದಲ್ಲಿ ಸಿಐಡಿ ತನಿಖೆ ಜೊತೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಯೂ ನಡೆಯುತ್ತಿದ್ದು, ಘಟನೆಯಲ್ಲಿ ಗಾಯಗೊಂಡವರ ಹೇಳಿಕೆ ಪಡೆಯಲಾಗಿದೆ. ಇದೀಗ ಬಿ.ದಯಾನಂದ್ ಅವರಿಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಮೇಲ್ನೋಟಕ್ಕೆ ಭದ್ರತಾ ಲೋಪ ಎಂದು ಆರೋಪಿಸಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಸೇರಿದಂತೆ ಐವರು ಹಿರಿಯ ಅಧಿಕಾರಿಗಳನ್ನು ರಾಜ್ಯ ಸರಕಾರ ಅಮಾನತುಗೊಳಿಸಿತ್ತು. ಇನ್ನು, ಪ್ರಕರಣದ ಭಾಗವಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಕಾರ್ಯದರ್ಶಿ ಸತ್ಯವತಿ ಅವರ ಮೇಲೆಯೂ ಗಂಭೀರ ಆರೋಪ ಕೇಳಿಬಂದಿದ್ದು, ಅವರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.