×
Ad

ಕೃಷಿ ಕಾಯಕದ ಬಗ್ಗೆ ಹೆಮ್ಮೆ ಇರಲಿ ಎಂದ ಹೈಕೋರ್ಟ್

Update: 2024-01-13 21:07 IST

ಬೆಂಗಳೂರು: ಅರ್ಜಿದಾರರೊಬ್ಬರು ‘ಕಾರಣ ಶೀರ್ಷಿಕೆ’ಯಲ್ಲಿ (ಕಾಸ್ ಟೈಟಲ್) ಉದ್ಯೋಗ ಉಲ್ಲೇಖಿಸದ ವಿಚಾರ ಹೈಕೋರ್ಟ್‍ನಲ್ಲಿ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು. ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು’ ಎಂಬ ಕವಿ ಸರ್ವಜ್ಞನ ತ್ರಿಪದಿ ಉದ್ದರಿಸುವ ಮೂಲಕ ಪೀಠವು ‘ಕೃಷಿ ಉದ್ಯೋಗದ ಬಗ್ಗೆ ಹೆಮ್ಮೆ ಇರಬೇಕುʼ ಎಂದು ಮೌಖಿಕವಾಗಿ ಅರ್ಜಿದಾರರಿಗೆ ಕಿವಿಮಾತು ಹೇಳಿತು.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ ಸಿಜೆ ಅವರು ಅರ್ಜಿದಾರರನ್ನು ಕುರಿತು ‘ಏನು ಕೆಲಸ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

ಆಗ ಅರ್ಜಿದಾರರ ಪರ ವಕೀಲರು ‘ಕೃಷಿಕ’ ಎಂದು ಮೆಲುಧ್ವನಿಯಲ್ಲಿ ಹೇಳಿದರು. ಆಗ ಪೀಠವು ‘ನಿಮ್ಮ ಉದ್ಯೋಗದ ಬಗ್ಗೆ ನಿಮಗೆ ನಾಚಿಕೆ ಏಕೆ? ಕೃಷಿಕನಾಗುವುದು ತಪ್ಪಲ್ಲ. ಕೃಷಿಕ ಎಂದು ಹೇಳಲು ಏಕೆ ನಾಚಿಕೆ ಏಕೆ? ಕಾಸ್ ಟೈಟಲ್‍ನಲ್ಲಿ ಉದ್ಯೋಗದ ಮಾಹಿತಿ ಉಲ್ಲೇಖಿಸಿಲ್ಲ. ಕೃಷಿ ಅತ್ಯುತ್ತಮ ಉದ್ಯೋಗ. ಇದಕ್ಕೆ ನಾಚಿಕೆ ಪಡಬಾರದು’ ಎಂದರು.

ಆ ಸಂದರ್ಭದಲ್ಲಿ ನ್ಯಾ. ದೀಕ್ಷಿತ್ ಅವರು ಕವಿ ಸರ್ವಜ್ಞ ಅವರ ತ್ರಿಪದಿ ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು, ಮೇಟಿಯಂ ರಾಟಿ ನಡೆದುದಲ್ಲವೇ ಲೋಕಕ್ಕೆ, ಮೇಟಿಯೇ ಶ್ರೇಷ್ಠ ಸರ್ವಜ್ಞ’ ಎಂದು ಚರ್ಚೆ ಉದ್ಧರಿಸಿದರು.

ಸರ್ವಜ್ಞನ ತ್ರಿಪದಿಯತ್ತ ಬೊಟ್ಟು ಮಾಡಿದ ಸಿಜೆ ಅವರು ‘ಕೋಟ್ಯಂತರ ಉದ್ಯೋಗಗಳಲ್ಲಿ ಕೃಷಿ ಶ್ರೇಷ್ಠ. ಇದರ ಬಗ್ಗೆ ಹೆಮ್ಮೆ ಇರಬೇಕು’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News