×
Ad

ಬೆಳಗಾವಿ | ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಐವರು ಆರೋಪಿಗಳ ಬಂಧನ

Update: 2023-10-02 22:02 IST

PTI Photo

ಬೆಳಗಾವಿ : ಜಿಲ್ಲೆಯ ಗೋಕಾಕ ನಗರದಲ್ಲಿ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಮೇಶ ಉದ್ದಪ್ಪ ಖಿಲಾರಿ, ದುರ್ಗಪ್ಪ ಸೋಮಲಿಂಗಪ್ಪ ವಡ್ಡರ, ಯಲ್ಲಪ್ಪ ಸಿದ್ದಪ್ಪ ಗೀಸನಿಂಗವ್ವಗೋಳ, ಕೃಷ್ಣಾ ಪ್ರಕಾಶ ಪೂಜೇರಿ, ರಾಮಸಿದ್ದ ಗುರಶಿದ್ದಪ್ಪ ತಪ್ಸಿ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್‌, ʼಪ್ರಕರಣದ ಓರ್ವ ಆರೋಪಿ ಬಸವರಾಜ ವಸಂತ ಖಿಲಾರಿ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.  ಆರೋಪಿ ರಮೇಶ ಉದ್ದಪ್ಪ ಖಿಲಾರಿ ಬಂಧನದ ವೇಳೆ ಪರಾರಿಯಾಗಲು ಯತ್ನಿಸಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆʼ ಎಂದು ಹೇಳಿದರು. 

ʼಸೆಪ್ಟೆಂಬರ್‌ 5ರಂದು ಸಂತ್ರಸ್ತ ಮಹಿಳೆ ತಮ್ಮ ಹಳ್ಳಿಯಿಂದ ಗೋಕಾಕ್ ನಗರಕ್ಕೆ ಬಂದಿದ್ದರು. ಅವರೊಂದಿಗೆ ಇನ್ನೊಬ್ಬ ವ್ಯಕ್ತಿ ಕೂಡ ಇದ್ದರು. ಇಬ್ಬರೂ ಮಾರುಕಟ್ಟೆಗೆ ಹೋಗಲು ಬೆಳಗ್ಗೆಯೇ ನಗರಕ್ಕೆ ಬಂದಿದ್ದರು. ಸದ್ಯ ತಲೆಮರೆಸಿಕೊಂಡ ಆರೋಪಿ ಬಸವರಾಜ ಖಿಲಾರಿ ಈ ಇಬ್ಬರ ಮುಖಪರಿಚಯ ಹೊಂದಿದ್ದ. ತಮ್ಮ ಮನೆಗೆ ಬಂದು ಚಹಾ ಕುಡಿದು ಹೋಗಬೇಕು ಎಂದು ಪುಸಲಾಯಿಸಿ ಮಹಿಳೆ ಹಾಗೂ ಪುರುಷನನ್ನು ಕರೆದುಕೊಂಡು ಹೋಗಿದ್ದಾನೆ. ಆ ನಂತರ ನಗರದ ಹೃದಯಭಾಗದಲ್ಲಿರುವ ಮನೆಯಲ್ಲೇ ಇಬ್ಬರನ್ನೂ ಕೂಡಿಹಾಕಿದ್ದ. ನಂತರ ಮನೆಗೆ ಬಂದ ಐವರು ಆರೋಪಿಗಳು ಬೆಳಗ್ಗೆಯಿಂದ ರಾತ್ರಿಯವರೆಗೂ ಕೃತ್ಯ ಎಸಗಿದ್ದಾರೆʼ ಎಂದು ಮಾಹಿತಿ ನೀಡಿದರು. 

ʼಈ ಸಂಭಂಧ ಸೆಪ್ಟೆಂಬರ್​ 29ರಂದು ಸಂತ್ರಸ್ತ ಮಹಿಳೆ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆʼ ಎಂದು ಎಸ್ಪಿ ಡಾ.ಭೀಮಾಶಂಕರ ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News