ಬಳ್ಳಾರಿ ಗುಂಪು ಘರ್ಷಣೆ| ಜನಾರ್ಧನ ರೆಡ್ಡಿಯನ್ನು ಗುರಿಯಾಗಿಸಿ ಗುಂಡು ಹಾರಿಸಲಾಗಿದೆ : ಆರ್.ಅಶೋಕ್ ಆರೋಪ
PC: x.com/RAshokaBJP
ಬೆಂಗಳೂರು, ಜ.2: ಬಳ್ಳಾರಿ ಶಾಸಕ ಜನಾರ್ಧನ ರೆಡ್ಡಿಯನ್ನು ಗುರಿಯಾಗಿಟ್ಟುಕೊಂಡು ಗುಂಡು ಹಾರಿಸಲಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಬಳ್ಳಾರಿಯಲ್ಲಿ ಕಳೆದ ರಾತ್ರಿ ನಡೆದ ಗಲಭೆಗೆ ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಹಾಗೂ ಬೆಂಬಲಿಗರು ಕಾರಣಕರ್ತರು ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ. ರಾಜಕೀಯವಾಗಿ ಬೆಳೆಯುತ್ತಿರುವ ಜನಾರ್ಧನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ ಎಂದು ದೂರಿದರು.
ರೆಡ್ಡಿ ಅವರನ್ನು ಗುರಿಯಾಗಿಟ್ಟುಕೊಂಡು ಗುಂಡು ಹಾರಿಸಲಾಗಿತ್ತು. ಆದರೆ ಅದು ಕಾಂಗ್ರೆಸ್ ಕಾರ್ಯಕರ್ತನಿಗೆ ತಗುಲಿದ್ದರಿಂದ ಆತ ಮೃತಪಟ್ಟಿದ್ದಾನೆ. ಬಳ್ಳಾರಿಯಲ್ಲಿ ವ್ಯಕ್ತಿಯ ಸಾವಿಗೆ ಭರತ್ ರೆಡ್ಡಿಯೇ ಕಾರಣ. ತಕ್ಷಣವೇ ಸರಕಾರ ಗೂಂಡಾ ಕಾಯ್ದೆಯಡಿ ಅವರನ್ನು ಬಂಧಿಸಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ನ್ಯಾಯಾಂಗ ತನಿಖೆ ನಡೆಸಬೇಕು ಜೊತೆಗೆ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲುಗೆ ಸರಕಾರ ರಕ್ಷಣೆ ಕೊಡಬೇಕೆಂದು ಮನವಿ ಮಾಡಿದರು.
ನಿನ್ನೆ ರಾತ್ರಿ ರೆಡ್ಡಿಯವರ ಮನೆ ಮುಂದೆ ಗುಂಪು ಕಟ್ಟಿಕೊಂಡು ಬಂದಿದ್ದರು. ಸತೀಶ್ ರೆಡ್ಡಿ, ಜನಾರ್ಧನ ರೆಡ್ಡಿ ಮನೆ ಮುಂದೆನೇ ಕಾಲು ಮೇಲೆ ಕಾಲು ಹಾಕಿ ಕೂತು ಬ್ಯಾನರ್ ಕಟ್ಟಿಸುತ್ತಿದ್ದರು. ಜನಾರ್ದನ ರೆಡ್ಡಿ ಮೇಲೆ ಹಲ್ಲೆ ಮಾಡಬೇಕು, ಅವರನ್ನು ಹತ್ಯೆ ಮಾಡಬೇಕು ಎನ್ನುವ ಕಾರಣಕ್ಕಾಗಿಯೇ ಕಾಂಗ್ರೆಸ್‌ನವರು ಬಂದಿದ್ದರು. ಇದು ಪೂರ್ವಯೋಜಿತ ಕೃತ್ಯ ಎಂದು ಅಶೋಕ್ ಆರೋಪಿಸಿದರು.
ಈ ಗಲಭೆ ನಡೆದಿದ್ದು ಕಾಂಗ್ರೆಸ್‌ನಿಂದಲೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮಾತ್ರ ಅಲ್ಲ, ವಿಕೋಪಕ್ಕೆ ಹೋಗಿದೆ. ಇದು ಸರಕಾರಿ ಪ್ರಾಯೋಜಕತ್ವದ ದಾಳಿ ಎಂದು ವಾಗ್ದಾಳಿ ನಡೆಸಿದರು.