ಬೆಂಗಳೂರು | ಶೌಚಾಲಯದಲ್ಲಿ ಮಹಿಳೆಯ ವಿಡಿಯೋ ಚಿತ್ರೀಕರಣ ಪ್ರಕರಣ: ಇನ್ಫೋಸಿಸ್ ಉದ್ಯೋಗಿ ಬಂಧನ
ಸಾಂದರ್ಭಿಕ ಚಿತ್ರ (credit: Meta AI)
ಬೆಂಗಳೂರು : ಬೆಂಗಳೂರಿನ ಇನ್ಫೋಸಿಸ್‌ನ ಕಚೇರಿಯ ಶೌಚಾಲಯದೊಳಗೆ ಮಹಿಳೆಯೊಬ್ಬರ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದಡಿ ಟೆಕ್ಕಿಯೊಬ್ಬರನ್ನು ಎಲೆಕ್ರ್ಟಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಆಂಧ್ರಪ್ರದೇಶ ಮೂಲದ ಉದ್ಯೋಗಿ ಸ್ವಪ್ನಿಲ್ ನಾಗೇಶ್‌ಮಲಿ(28) ಎಂದು ಗುರುತಿಸಲಾಗಿದೆ.
ಆರೋಪಿ ನಾಗೇಶ್ ಸ್ವಪ್ನಿಲ್ ಮಲಿ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಯ ವಿಡಿಯೋ ಚಿತ್ರೀಕರಣ ಮಾಡುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಆರೋಪಿಯು ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರಹಸ್ಯವಾಗಿ ತನ್ನ ಮೊಬೈಲ್‌ನಲ್ಲಿ ಮಹಿಳಾ ಉದ್ಯೋಗಿಯ ಶೌಚಾಲಯದ ವಿಡಿಯೋ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಮಹಿಳೆ ಕಿರುಚಾಡಿದ್ದು, ಅಲ್ಲಿಯೇ ಮಹಿಳಾ ಉದ್ಯೋಗಿಯ ಕ್ಷಮೆ ಕೇಳಿದ್ದಾನೆ. ಈ ಹಂತದಲ್ಲಿ ಎಚ್‌ಆರ್ ಸಿಬ್ಬಂದಿ ಬಂದು ಪರಿಶೀಲನೆ ಮಾಡಿದಾಗ ವಿಡಿಯೋ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಆರೋಪಿಯ ಮೊಬೈಲ್‌ನಲ್ಲಿ ಸುಮಾರು 30ಕ್ಕೂ ಅಧಿಕ ಮಹಿಳೆಯರ ವಿಡಿಯೋ ಪತ್ತೆಯಾಗಿದೆ ಎಂದು ತಿಳಿದಿಬಂದಿದ್ದು, ಸದ್ಯ ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಯು ಇನ್ಫೋಸಿಸ್ ಕಂಪೆನಿಯ ಹೀಲೀಕ್ಸ್ ಡಿಪಾರ್ಟ್ಮೆಂಟ್‌ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.