ಬೆಂಗಳೂರು ನಗರ ಜಿಲ್ಲೆಯಲ್ಲಿ ಸಕ್ರಿಯವಾಗಿರದ ರಾಜಕೀಯ ಪಕ್ಷಗಳಿಗೆ ನೋಟಿಸ್: ಜು.18ಕ್ಕೆ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ವಿಚಾರಣೆ
ಚುನಾವಣಾ ಆಯೋಗ | PC : PTI
ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸದೇ ಇರುವ ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ತೆಗೆದು ಹಾಕಲು ಭಾರತ ಚುನಾವಣಾ ಆಯೋಗ ನಿರ್ಧರಿಸಿದ್ದು, ಈ ಬಗ್ಗೆ ವಿಚಾರಣೆಯನ್ನು ಜುಲೈ 18ರಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.
ಬುಧವಾರ ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಭಾರತ ಚುನಾವಣಾ ಆಯೋಗವು ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಪ್ರಕರಣ 29(ಎ)ರಡಿ ನೋಂದಣಿ ಮಾಡಿಕೊಂಡಿದ್ದರೂ ಸಕ್ರಿಯವಾಗಿ ಕಾರ್ಯನಿರ್ವಹಿಸದ ಹಾಗೂ ವಿಳಾಸ ಪತ್ತೆ ಹಚ್ಚಲು ಸಾಧ್ಯವಿಲ್ಲದ, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಕಾರಣ ಕೇಳಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ನೋಟಿಸ್ ಅನ್ನು ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳಾದ ನಮ್ಮ ಕಾಂಗ್ರೆಸ್, ಪ್ರಜಾ ರೈತ ರಾಜ್ಯ ಪಕ್ಷ, ಕಲ್ಯಾಣ ಕ್ರಾಂತಿ ಪಾರ್ಟಿ, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ, ರಕ್ಷಕ ಸೇನೆ, ಮಹಿಳಾ ಪ್ರಧಾನ ಪಕ್ಷ, ಅಂಬೇಡ್ಕರ್ ಜನತಾ ಪಾರ್ಟಿ ಹಾಗೂ ಕರ್ನಾಟಕ ಪ್ರಜಾ ವಿಕಾಸ ಪಾರ್ಟಿಗಳು 6 ವರ್ಷಗಳಿಂದ ಯಾವುದೇ ಲೋಕಸಭೆ, ವಿಧಾನಸಭೆ ಹಾಗೂ ಉಪ ಚುನಾವಣೆಗಳಲ್ಲಿ ಸ್ಪರ್ಧಿಸದೇ ಇರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪಟ್ಟಿಯಿಂದ ತೆಗೆದು ಹಾಕಲು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಕಾರಣ ಕೇಳಿ ನೋಟಿಸ್‍ಅನ್ನು ಜಾರಿಗೊಳಿಸಿದ್ದಾರೆ ಎಂದು ಜಿ.ಜಗದೀಶ ಹೇಳಿದ್ದಾರೆ.
ನೋಂದಣಿಯಾದ ರಾಜಕೀಯ ಪಕ್ಷಗಳ ಪಟ್ಟಿಯಿಂದ ತೆಗದು ಹಾಕುವ ಮುನ್ನ ಈ ರಾಜಕೀಯ ಪಕ್ಷಗಳಿಗೆ ತಮ್ಮ ಹೇಳಿಕೆ ದಾಖಲಿಸಲು ಒಂದು ಅವಕಾಶವನ್ನು ಕಲ್ಪಿಸಿದ್ದು, ಜು.18 ರಂದು ಪಕ್ಷದ ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿಗಳ ಪ್ರಮಾಣ ಪತ್ರ, ಇತರೆ ದಾಖಲೆಗಳು ಹಾಗೂ ಮನವಿಯೊಂದಿಗೆ ವಿಚಾರಣೆಗೆ ಪಕ್ಷದ ಮುಖ್ಯಸ್ಥರು/ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಜಿ.ಜಗದೀಶ ತಿಳಿಸಿದ್ದಾರೆ.
ಒಂದು ವೇಳೆ ನಿಗದಿತ ಸಮಯದೊಳಗೆ ಪಕ್ಷದಿಂದ ಯಾವುದೇ ಲಿಖಿತ ಮನವಿ ಸ್ವೀಕೃತವಾಗದೇ ಇದ್ದಲ್ಲಿ ಪಕ್ಷದ ಯಾವುದೇ ಹೇಳಿಕೆ ಇರುವುದಿಲ್ಲವೆಂದು ಪರಿಗಣಿಸಿ, ಪಕ್ಷವನ್ನು ಸಂಪರ್ಕಿಸದೇ ಚುನಾವಣಾ ಆಯೋಗದಿಂದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿ.ಜಗದೀಶ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.