ಶೇ.1ರಷ್ಟು ಮೀಸಲಾತಿ ಭರವಸೆ | ಧರಣಿ ಸತ್ಯಾಗ್ರಹ ಹಿಂಪಡೆದ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ
ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ.1 ರಷ್ಟು ಮೀಸಲಾತಿ ಬೇಡಿಕೆಯನ್ನು ಪರಿಶೀಲಿಸಿ, ನ್ಯಾಯ ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ ಹಿನ್ನಲೆಯಲ್ಲಿ ರಾಜ್ಯದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ಫ್ರೀಡಂ ಪಾರ್ಕ್‌ನ ಧರಣಿ ಸತ್ಯಾಗ್ರಹವನ್ನು ಹಿಂಪಡೆದಿದೆ.
ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಒಳಮೀಸಲಾತಿ ಅಲೆಮಾರಿ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿ, ಸಚಿವರೊಂದಿಗೆ ಚರ್ಚೆ ನಡೆಸಿದ ಬಳಿಕ, ಒಕ್ಕೂಟದ ತೀರ್ಮಾನವನ್ನು ಪ್ರಕಟನೆ ಮೂಲಕ ಘೋಷಿಸಿದ್ದಾರೆ. ಸರಕಾರದ ತೀರ್ಮಾನವನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ಆದರೆ ಸರಕಾರದಿಂದ ಖಚಿತವಾದ ಆದೇಶ ಬರಬೇಕು. ಅಲ್ಲಿಯ ತನಕ ಯಾವುದೇ ರೀತಿಯ ಉದ್ಯೋಗ ಭರ್ತಿಯನ್ನು ಮಾಡಬಾರದು ಎಂದು ಹೇಳಿದ್ದಾರೆ.
ಕೋರ್ಟಿನಲ್ಲಿರುವ ಪ್ರಕರಣವನ್ನು ಹಿಂಪಡೆದುಕೊಳ್ಳಬೇಕಾ? ಬೇಡವೇ? ಎಂದು ನಮ್ಮ ವಕೀಲರು ಮತ್ತು ಸರಕಾರಿ ವಕೀಲರ ಇವರಿಬ್ಬರ ಮಧ್ಯೆ ಸಮಲೋಚನೆ ಮಾಡಿ, ಪರಸ್ಪರ ಒಡಂಬಡಿಕೆಯ ಮೇಲೆ ಸಮಿತಿ ತೀರ್ಮಾನಿಸಲಾಗುತ್ತದೆ. ಸರಕಾರ ಕೂಡಲೇ ಶೇ.1 ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಕೊಟ್ಟು, ಅದನ್ನು ಜಾರಿ ಮಾಡಬೇಕು. ಮತ್ತೊಂದು ಕಡೆ ಕಾನೂನು ತೊಡಕನ್ನು ನಿವಾರಣೆ ಮಾಡಬೇಕು. ಅದಕ್ಕೆ ಇರುವ ಮಾರ್ಗವೇನು? ಎನ್ನುವುದರ ಬಗ್ಗೆ ಸರಕಾರಿ ವಕೀಲರ ಜೊತೆಗೂ ಚರ್ಚೆ ಮಾಡಿ, ಒಕ್ಕೂಟ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಇದು ಅಲೆಮಾರಿ ಸಮುದಾಯಕ್ಕೆ ಸಿಕ್ಕ ಅತಿ ದೊಡ್ಡ ವಿಜಯವಾಗಿದೆ. ಚದುರಿ ಹೋಗಿದ್ದ ಸಮುದಾಯ ಒಟ್ಟುಗೂಡಿ, ದೊಡ್ಡಮಟ್ಟದ ಹೋರಾಟ ಮಾಡಿ, ದಿಲ್ಲಿಯ ತನಕ ಹೋಗಿ, ಮತ್ತೆ ಬಂದು ಸರಕಾರಕ್ಕೆ ಮನವರಿಕೆ ಮಾಡುವುದರಲ್ಲಿ ಅಲೆಮಾರಿ ಸಮುದಾಯ ಯಶಸ್ಸುಗೊಂಡಿದೆ ಎಂದರು.
ಇದರ ಮೂಲಕ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತೇವೆ. ಸರಕಾರ ಕೊಟ್ಟ ಮಾತಿನಂತೆ ಉದ್ಯೋಗ ಭರ್ತಿ ಪ್ರಾರಂಭ ಮಾಡುವುದಕ್ಕೂ ಮೊದಲು, ಶೀಘ್ರವಾಗಿ ಸಮಸ್ಯೆ ಬಗೆಹರಿಸುತ್ತದೆ ಮತ್ತು ಚಳಿಗಾಳ ಅಧಿವೇಶನಕ್ಕಿಂತ ಮೊದಲು ಸಮಸ್ಯೆಗೆ ಸರಕಾರ ಪರಿಹಾರ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸವಿದೆ. ಒಂದು ವೇಳೆ ನಮ್ಮ ನಿರೀಕ್ಷೆಗೂ ಮೀರಿ ಮತ್ತೆ ನಮ್ಮ ಸಮಸ್ಯೆ ಬಗೆಹರಿಸದೆ, ಉದ್ಯೋಗ ಭರ್ತಿ ಮಾಡಲು ಮುಂದಾದರೆ, ನಮ್ಮ ಹಕ್ಕಿಗಾಗಿ ಸಮುದಾಯ ಮತ್ತೆ ಬೀದಿಗೆ ಇಳಿಯುವುದು ಖಚಿತ ಎಂದು ಎಚ್ಚರಿಕೆಯನ್ನು ನೀಡಿದರು.
ಹೋರಾಟದಲ್ಲಿ ಕರ್ನಾಟಕ ಜನಶಕ್ತಿ ಅಧ್ಯಕ್ಷ ನೂರ್ ಶ್ರೀಧರ್, ಮಹಾಒಕ್ಕೂಟದ ಪರವಾಗಿ ಶೇಷಪ್ಪ, ಮಂಜುನಾಥ್ ದಾಯತ್ಕರ್, ಬಸವರಾಜ್ ನಾರಾಯಣ್ಕರ್, ಚಿನ್ನಾ ಡಿ.ಆರ್, ಛಾವಡಿ ಲೋಕೇಶ್, ವಸಂತ್ ಹಂದಿಗುಂದಿ, ಸುಬ್ಬಣ್ಣ, ವೆಂಕಟರಾಮಯ್ಯ, ರಮಣಯ್ಯ, ಕೆವಿಎಸ್ ಪದಾಧಿಕಾರಿಗಳಾದ ಸರೋವರ್ ಬೆಂಕಿಕೆರೆ, ದುರ್ಗೇಶ್, ಹೇಮಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು.