×
Ad

“ಭಾರತದ ಬೆಳವಣಿಗೆಯ ಕಥೆ ಕೇವಲ ಭ್ರಮೆ”: ಬೆಂಗಳೂರಿನ ಸ್ಟಾರ್ಟ್‌ಅಪ್ ಉದ್ಯಮಿ ಧವಲ್ ಜೈನ್ ಕಳವಳ

ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದ ಉದ್ಯಮಿ

Update: 2025-10-30 16:46 IST

ಸಾಂದರ್ಭಿಕ ಚಿತ್ರ (Photo: PTI)

ಬೆಂಗಳೂರು: “ಭಾರತದ ಬೆಳವಣಿಗೆಯ ಕಥೆ ಎನ್ನುವುದು ಜನರಿಗೆ ನೀಡಲಾಗುತ್ತಿರುವ ಸುಳ್ಳು ಭ್ರಮೆ” ಎಂದು ಮಾನಸಿಕ ಆರೋಗ್ಯ ಸ್ಟಾರ್ಟ್‌ಅಪ್ ಮೇವ್ ಹೆಲ್ತ್ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಧವಲ್ ಜೈನ್ ಹೇಳಿದ್ದಾರೆ.

ದೇಶದ ಆರ್ಥಿಕ ಹಾಗೂ ಸಾಮಾಜಿಕ ದಿಕ್ಕಿನ ಕುರಿತು ತಮ್ಮ ನೇರ ಅಭಿಪ್ರಾಯ ಹಂಚಿಕೊಂಡಿರುವ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಧವಲ್ ಜೈನ್, “ನಾನು ವರ್ಷಗಳಿಂದ ಭಾರತದ ಬೆಳವಣಿಗೆಯ ಕಥೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೆ. ಆದರೆ ಈಗ ಅದು ಕೇವಲ ನಮಗೆ ನೀಡಲಾಗುತ್ತಿರುವ ಕಥೆಯಂತೆ ಭಾಸವಾಗುತ್ತಿದೆ. ನಾವು ವಸಾಹತುಶಾಹಿಯಿಂದ ಚೇತರಿಸಿಕೊಳ್ಳುತ್ತಿದ್ದ ಬಡ ದೇಶವೆಂದು ನಂಬಿದ್ದೆ. ಆದಾಯ ಹೆಚ್ಚಾದರೆ ಸ್ವಚ್ಛ ರಸ್ತೆ, ಉತ್ತಮ ವ್ಯವಸ್ಥೆ, ಮೂಲಸೌಕರ್ಯ ಎಲ್ಲವೂ ಬದಲಾಗುತ್ತದೆ ಎಂದು ಭಾವಿಸಿದ್ದೆ. ಆದರೆ ಬದಲಾವಣೆ ನಿಜವಾಗಿಯೂ ನಡೆಯುತ್ತಿಲ್ಲ,” ಎಂದು ಅವರು ವಿಷಾದಿಸಿದ್ದಾರೆ.

ಭ್ರಷ್ಟಾಚಾರ ಮತ್ತು ಕೊರತೆಯ ಮನೋಭಾವವೇ ದೇಶದ ಪ್ರಗತಿಗೆ ಪ್ರಮುಖ ಅಡ್ಡಿ ಎಂದು ಅವರು ಹೇಳಿದ್ದಾರೆ. “ಉತ್ತಮ ನಡವಳಿಕೆ ಮೇಲಿನಿಂದಲೇ ಆರಂಭವಾಗಬೇಕು. ರ್ಯಾಲಿ ನಡೆಸಿದ ಬಳಿಕ ರಾಜಕಾರಣಿಗಳು ಮೈದಾನಗಳನ್ನು ಕಸದಿಂದ ಬಿಟ್ಟುಹೋದಾಗ ಸಾಮಾನ್ಯ ನಾಗರಿಕರು ‘ಸ್ವಚ್ಛ ಭಾರತ ಮಿಷನ್‌’ ಅನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆ ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ.

ತೆರಿಗೆ ಹಣದ ಬಳಕೆಯ ಕುರಿತು ಪಾರದರ್ಶಕತೆ ಇಲ್ಲದಿರುವುದು ಹಾಗೂ ಸರ್ಕಾರಿ ಇಲಾಖೆಗಳ ಅಸಮರ್ಥತೆ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ತೆರಿಗೆ ಪಾವತಿಸುವಾಗ ಅದರ ಒಂದು ಭಾಗ ಯಾರಾದರೊಬ್ಬರ ಜೇಬಿಗೆ ಹೋಗುತ್ತದೆ ಎಂಬ ಅರಿವು ನನ್ನನ್ನು ಚುಚ್ಚುತ್ತದೆ. ತೆರಿಗೆ ಹಣ ಹೇಗೆ ಬಳಸಲಾಗುತ್ತಿದೆ ಎಂಬುದರ ಬಗ್ಗೆ ನಾಗರಿಕರಿಗೆ ತಿಳಿಯುವ ಹಕ್ಕು ಇರಬೇಕು,” ಎಂದು ಧವಲ್ ಹೇಳಿದ್ದಾರೆ.

ಅವರು ತಮ್ಮ ನೆರೆಯ ಮಗನ ಜೀವ ಬಲಿ ಪಡೆದ ರಸ್ತೆ ಗುಂಡಿ ಅಪಘಾತವನ್ನು ಉಲ್ಲೇಖಿಸಿ, “ಅದು ಸರಿಪಡಿಸಿದರೂ ಇತರ ಗುಂಡಿಗಳು ಹಾಗೆಯೇ ಉಳಿದವು. ನಾಗರಿಕರ ಸುರಕ್ಷತೆ ಬಗ್ಗೆ ನಾವು ಮಾತನಾಡುವುದೇ ತಮಾಷೆಯಾಗಿದೆ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (AI) ಹಾಗೂ ಮಾನವರೂಪದ ಯಂತ್ರಗಳು (Humanoids) ದೇಶದ ನಿರುದ್ಯೋಗದ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಬಹುದೆಂಬ ಭಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. “ನಾವು ನಾಶವಾಗುತ್ತಿದ್ದೇವೆ. ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಸರ್ಕಾರ ಅದನ್ನು ನಿಭಾಯಿಸಲು ಸಿದ್ಧವಾಗಿಲ್ಲ. ಬಹುಶಃ ಸ್ವಯಂಚಾಲಿತ ಕಾರುಗಳನ್ನು ನಿಷೇಧಿಸಿದಂತೆ ಹುಮನಾಯ್ಡ್‌ಗಳನ್ನೂ ನಿಷೇಧಿಸಬಹುದು,” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಆದರೂ ಉದ್ಯಮಶೀಲತೆಯ ಬಗ್ಗೆ ಜೈನ್ ಆಶಾವಾದಿ ಮನೋಭಾವ ವ್ಯಕ್ತಪಡಿಸಿದ್ದಾರೆ. “ಉದ್ಯಮಿಗಳು ಉತ್ತಮ ವ್ಯವಸ್ಥೆಗಳನ್ನು ನಿರ್ಮಿಸಿ, ಸಂಶೋಧನೆಗೆ ಹಣಕಾಸು ಒದಗಿಸಿ, ಆರೋಗ್ಯ ಸೇವೆ ಹಾಗೂ ಹೊಸತನವನ್ನು ಉತ್ತೇಜಿಸುವುದೇ ನಿಜವಾದ ಮಾರ್ಗ. ಯುವ ಭಾರತೀಯರು ಎಲ್ಲ ಅಡೆತಡೆಗಳ ನಡುವೆಯೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನು ಹೆಚ್ಚು ಪ್ರೋತ್ಸಾಹಿಸಬೇಕು,” ಎಂದು ಅವರು ಹೇಳಿದ್ದಾರೆ.

“ನನ್ನಂತಹ ಸವಲತ್ತು ಪಡೆದ ಭಾರತೀಯರಿಗೆ ಖಾಸಗೀಕರಣಗೊಂಡ ಜೀವನ ಆರಾಮದಾಯಕವಾಗಿದೆ. ನಾನು ನನ್ನ ದೇಶ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಬಯಸುತ್ತೇನೆ. ಅದು ಈಗ ನಡೆಯುತ್ತಿಲ್ಲ. ಆದರೆ ನನ್ನ ನಿಲುವು ತಪ್ಪು ಎಂದು ಸಾಬೀತಾಗಲಿ ಎಂಬ ಆಸೆಯಿದೆ. ಭಾರತ ಅಭಿವೃದ್ಧಿ ಹೊಂದುತ್ತದೆ ಎಂಬ ನಂಬಿಕೆ ನನ್ನೊಳಗೆ ಇನ್ನೂ ಜೀವಂತವಾಗಿದೆ", ಎಂದು ತಮ್ಮ ಹೇಳಿಕೆಯ ಕೊನೆಯಲ್ಲಿ ಅವರು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News