×
Ad

ನ.4 ರಿಂದ ಮೂರು ದಿನಗಳ ಕಾಲ ‘ಬೆಂಗಳೂರು ಕೌಶಲ್ಯ ಶೃಂಗಸಭೆ 2025’ ಆಯೋಜನೆ

Update: 2025-10-31 20:49 IST

ಬೆಂಗಳೂರು : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಭಾಗಿತ್ವದೊಂದಿಗೆ ನ.4 ರಿಂದ ನ.6ರವರೆಗೆ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಮೊದಲ ಬಾರಿಗೆ ‘ಬೆಂಗಳೂರು ಕೌಶಲ್ಯ ಶೃಂಗಸಭೆ 2025’ಯನ್ನು ಆಯೋಜಿಸುತ್ತಿದೆ.

ನ.4ರಂದು ಶೃಂಗಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲ್, ಡಾ. ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಡಾ. ಎಂ.ಸಿ. ಸುಧಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಈ ಶೃಂಗಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಮಾರಿಷಸ್ ಗಣರಾಜ್ಯದ ಕಾರ್ಮಿಕ ಮತ್ತು ಕೈಗಾರಿಕಾ ಸಂಬಂಧಗಳ ಸಚಿವ ಮುಹಮ್ಮದ್ ರೆಝಾ ಖಾಸ್ಸಂ ಉತೀಮ್, ಜರ್ಮನಿ ರಾಯಭಾರಿ ಡಾ. ಫಿಲಿಪ್ ಅಕೆರ್ಮನ್, ಕೋರ್ಸೆರಾ ಸಂಸ್ಥೆಯ ಭಾರತ ಮತ್ತು ಏಷ್ಯಾ ಪೆಸಿಫಿಕ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಅಶುತೋಷ್ ಗುಪ್ತಾ ಸೇರಿದಂತೆ ಮತ್ತಿತರ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.

‘ಮಾನವ ಸಂಪನ್ಮೂಲ 2030: ವಿಸ್ತರಣೆ, ವ್ಯವಸ್ಥೆಗಳು, ಸಮನ್ವಯ’ ತತ್ವದಡಿಯಲ್ಲಿ ಶೃಂಗಸಭೆಯನ್ನು ನಡೆಸಲಾಗುತ್ತಿದ್ದು, ಸಭೆಯಲ್ಲಿ 100ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಭಾಷಣಕಾರರು, 50ಕ್ಕೂ ಹೆಚ್ಚು ಪ್ರದರ್ಶಕರು, ಸಹಭಾಗಿದಾರರು ಸೇರಿ 3,000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.

ಸಭೆಯನ್ನು ಕರ್ನಾಟಕದ ಕೌಶಲ್ಯ ಮತ್ತು ಮಾನವ ಸಂಪನ್ಮೂಲವನ್ನು ಜಾಗತಿಕ ಉದ್ಯೋಗಾರ್ಹತೆಗೆ ತಯಾರಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ. ಸಭೆಯು ವಿದೇಶಿ ಸಹಭಾಗಿತ್ವಗಳ ವೃದ್ಧಿ, ಭಾಷಾ ತರಬೇತಿ ಮತ್ತು ಪ್ರಮಾಣಪತ್ರ ನೀಡುವ ವ್ಯವಸ್ಥೆಗಳಿಗೆ ಉತ್ತೇಜನ ನೀಡಲಾಗುತ್ತದೆ. ಈ “ಬೆಂಗಳೂರು ಕೌಶಲ್ಯ ಶೃಂಗಸಭೆ”ಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಸಲಾಗಿದೆ.

ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ  https://bengaluruskillsummit.com/ ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಪ್ರಕಟನೆಯಲ್ಲಿ ತಿಳಿಸಿದೆ.

ಬೆಂಗಳೂರು ಕೌಶಲ್ಯ ಶೃಂಗಸಭೆ ಭಾರತವನ್ನು ಮುಂದಿನ ಮಾನವ ಸಂಪನ್ಮೂಲ ಅಭಿವೃದ್ಧಿಯ ಕಡೆಗೆ ಮುನ್ನಡೆಸುವಲ್ಲಿ ಕರ್ನಾಟಕದ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪ್ರಾಥಮಿಕ ಗುರಿಯು ಸಮಾವೇಶ, ಕೈಗಾರಿಕಾ ಅವಶ್ಯಕತೆಗಳಿಗೆ ಹೊಂದಿಕೊಂಡು, ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಇರುವ ಕೌಶಲ್ಯಾಭಿವೃದ್ಧಿ ಚೌಕಟ್ಟನ್ನು ನಿರ್ಮಿಸುವುದಾಗಿದೆ. ಇದರಿಂದ ಯುವಜನರು ಕೌಶಲ್ಯ ವೃತ್ತಿಪರರು, ಆವಿಷ್ಕಾರಕರು ಅಥವಾ ಉದ್ಯಮಿಗಳಾಗಿ ಭವಿಷ್ಯದ ಆರ್ಥಿಕತೆಯನ್ನು ರೂಪಿಸಲು ಶಕ್ತಿಶಾಲಿಗಳಾಗುತ್ತಾರೆ.

-ಡಾ. ಶರಣಪ್ರಕಾಶ್ ಪಾಟೀಲ್, ಕೌಶಲ್ಯಾಭಿವೃದ್ಧಿ ಸಚಿವ

ಬೆಂಗಳೂರು ಕೌಶಲ್ಯ ಶೃಂಗಸಭೆಯ ಉದ್ದೇಶ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ನವೀನ ಆಲೋಚನೆಗಳನ್ನು ಒಂದೇ ವೇದಿಕೆಗೆ ಒಗ್ಗೂಡಿಸುವುದು. ಇದರ ಮೂಲಕ ಕೌಶಲ್ಯಾಭಿವೃದ್ಧಿಯು ಯುವಜನತೆಗೆ ನಿಜವಾದ ಉದ್ಯೋಗಾವಕಾಶವನ್ನು ಅರ್ಥಪೂರ್ಣ ಉದ್ಯೋಗಾವಕಾಶಗಳನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಅನ್ವೇಷಿಸುವುದಾಗಿದೆ.

-ಡಾ. ಗಾಯತ್ರಿ ವಾಸುದೇವನ್, ಲೇಬರ್‍ನೆಟ್ ಸರ್ವಿಸಸ್ ಇಂಡಿಯಾ ಪ್ರೈ. ಲಿ.ನ ಅಧ್ಯಕ್ಷೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News