ನ.18ರಿಂದ ʼಬೆಂಗಳೂರು ಟೆಕ್ ಶೃಂಗಸಭೆʼ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬಹು ನಿರೀಕ್ಷಿತ 28ನೆ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ ನ.18ರಿಂದ ಮೂರು ದಿನಗಳ ಕಾಲ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ನಡೆಯಲಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಟೆಕ್ ಶೃಂಗಸಭೆಗೆ 26 ವರ್ಷದ ಪರಂಪರೆ ಇದೆ. 28ನೆ ಸಭೆ ನವೆಂಬರ್ 18ರಿಂದ 20ರ ವರೆಗೆ ಆಯೋಜನೆಗೊಂಡಿದೆ. ಇದರಲ್ಲಿ 60 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವರು. ತಂತ್ರಜ್ಞಾನ ವಿಚಾರ ಹಾಗೂ ಉದ್ಯಮವನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಜಾಗತಿಕ ಕಾರ್ಯಕ್ರಮ ಇದಾಗಿದ್ದು, ಈ ಬಾರಿ ಕ್ವಾಂಟಮ್ ಕಂಪ್ಯೂಟಿಂಗ್, ಎಐ, ಸ್ಪೇಸ್‍ಟೆಕ್, ಹೆಲ್ತ್ ಟೆಕ್‍ಗೆ ವಿಶೇಷ ಗಮನ ನೀಡುತ್ತಿದ್ದು, ಇವುಗಳ ನಡುವೆ ಈ ಮೂರು ನೀತಿ ಪ್ರಧಾನ ಆಕರ್ಷಣೆಯಾಗಿದೆ ಎಂದರು.
ಅದರಲ್ಲೂ, ನ.20 ರಂದು ಫ್ಯೂಚರ್ ಮೇಕರ್ಸ್ ಕಾಂಕ್ಲೇವ್ ನಡೆಯಲಿದ್ದು, 10 ಸಾವಿರಕ್ಕೂ ಹೆಚ್ಚಿನ ಉದ್ಯಮಿಗಳು, ಹೂಡಿಕೆದಾರರು, ಸ್ಟಾರ್ಟ್ ಆ್ಯಪ್ ಸಂಸ್ಥಾಪಕರು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆವಿಷ್ಕಾರ ಮಾಡಿರುವವರು ಪಾಲ್ಗೊಳ್ಳಲಿದ್ದಾರೆ. ಜತೆಗೆ ಆವಿಷ್ಕಾರ, ಸಂಶೋಧನೆ ಹಾಗೂ ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗಮನ ಕೊಡಲಾಗಿದೆ ಎಂದು ವಿವರಿಸಿದರು.
ಹೊಸ ನೀತಿ: ಸ್ಟಾರ್ಟ್ ಆಪ್ ಐಟಿ ಸ್ಪೇಸ್ ಚೆಕ್‍ಗೆ ಹೊಸ ನೀತಿ ತರಲು ಸರಕಾರ ಮುಂದಾಗಿದೆ. ಒಟ್ಟಾರೆ, ಈ ಬಾರಿ ನೀತಿಗಳನ್ನು ಜಾಗತಿಕ ದೃಷ್ಟಿಕೋನದಲ್ಲೇ ರೂಪಿಸಲಾಗಿದೆ. ಮಾಹಿತಿ ತಂತ್ರಜ್ಞಾನ, ಸ್ಟಾರ್ಟಪ್, ಸ್ಪೇಸ್‍ಟೆಕ್‍ನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈಗಾಗಲೇ ಜಗತ್ತಿಗೆ ಪರಿಚಯವಿದೆ. ಈ ನೀತಿಯ ಮೂಲಕ ಕರ್ನಾಟಕದಲ್ಲಿರುವ ಇನ್ನಷ್ಟು ಅವಕಾಶಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಸಂಕನೂರ್ ಸೇರಿದಂತೆ ಪ್ರಮುಖರಿದ್ದರು.
ಶೃಂಗಸಭೆಯ ವಿಶೇಷತೆ:
► ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಹುಡುಕಾಟಕ್ಕೆ ಅನುವು ಮಾಡಿಕೊಡುವುದು, ಕೌಶಲಯುತ ಮಾನವ ಸಂಪನ್ಮೂಲ ಶಕ್ತಿಯನ್ನು ಅನಾವರಣಗೊಳಿಸುವುದು.
► ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರು ಮತ್ತು ನವೋದ್ಯಮಗಳಿಗೆ ಸೇತುವೆಯಾಗಿ ವೇದಿಕೆ ಕಲ್ಪಿಸುವುದು.
► ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿ ಹೊಸದಾಗಿ ರಚಿಸುವ ಕ್ಲಸ್ಟರ್‍ಗಳಲ್ಲಿ ಅವಕಾಶಗಳನ್ನು ಕಲ್ಪಿಸುವ ಮೂಲಕ ಉದ್ಯೋಗ ಸೃಷ್ಟಿಗೂ ಪ್ರೋತ್ಸಾಹ ನೀಡುವುದು.
► ಈ ಮೂರು ನೀತಿಗಳಿಂದ ಮುಂದಿನ ಐದು ವರ್ಷಗಳಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗ ಸೃಷ್ಟಿಯ ಗುರಿ ಸಾಧಿಸುವ ನಿಟ್ಟಿನಲ್ಲಿ ಸುಧಾರಣೆ ಕ್ರಮಗಳು.
► ನೆರೆ ರಾಜ್ಯಗಳು ವಿವಿಧ ವಿನಾಯಿತಿ ನೀಡಿ ಹೂಡಿಕೆದಾರರನ್ನು ಸೆಳೆಯುತ್ತಿರುವುದರಿಂದ ಪೈಪೋಟಿ ನೀಡಲು ಮುಕ್ತ ಅವಕಾಶಗಳನ್ನು ನೀಡುವುದು.
► ನವೋದ್ಯಮಗಳಿಗೆ ಆರ್ಥಿಕ ನೆರವು, ವಿನಾಯಿತಿಗಳು, ಪ್ಲಗ್ ಎಂಡ್ ಪ್ಲೇನಂತಹ ಸೌಲಭ್ಯಗಳನ್ನು ಪ್ರಕಟಿಸುವುದು. ಈ ಮೂಲಕ ಈ ಕ್ಷೇತ್ರದ ಬೆಳವಣಿಗೆಗೆ ಪೂರಕ ಪರಿಸರಕ್ಕೆ ಒತ್ತು.
600 ಕೋಟಿ ಹೂಡಿಕೆ: ಕರ್ನಾಟಕವನ್ನು ಭಾರತದ ಡೀಪ್ ಟೆಕ್ ರಾಜಧಾನಿಯಾಗಿ ರೂಪಿಸುವ ಉದ್ದೇಶದಿಂದ ಸರಕಾರ 600 ಕೋಟಿ ರೂ. ಹೂಡಿಕೆಗೆ ಬದ್ಧವಾಗಿದೆ. ಇದರಲ್ಲಿ ಎಐ, ಕ್ವಾಂಟಮ್ ಕಂಪ್ಯೂಟಿಂಗ್, ರೋಬೋಟಿಕ್ಸ್ ಹಾಗೂ ಸಸ್ಟೇನಬಿಲಿಟಿ ಆಧಾರಿತ ಆವಿಷ್ಕಾರಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.