×
Ad

ಮಹಿಳೆಯ ಅಪಹರಣ ಪ್ರಕರಣ : ಭವಾನಿ ರೇವಣ್ಣ ಪತ್ತೆಗೆ ಮುಂದುವರೆದ ಶೋಧ

Update: 2024-06-02 19:06 IST

 ಭವಾನಿ ರೇವಣ್ಣ

ಬೆಂಗಳೂರು : ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಎಸ್‌ಐಟಿ ವಿಚಾರಣೆಗೆ ಗೈರಾಗಿರುವ ಜೆಡಿಎಸ್ ಶಾಸಕ ರೇವಣ್ಣ ಪತ್ನಿ ಭವಾನಿ ಅವರ ಪತ್ತೆ ತನಿಖಾಧಿಕಾರಿಗಳು ಶೋಧ ಆರಂಭಿಸಿದ್ದಾರೆ.

ಭವಾನಿ ಅವರಿಗಾಗಿ ಮೈಸೂರು, ಹಾಸನ, ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ವಿವಿಧೆಡೆ ಎಸ್‌ಐಟಿ ಶೋಧ ನಡೆಸಿದೆ. ಭವಾನಿ ಅವರ ಸಂಬಂಧಿಕರ ಮನೆಗಳಲ್ಲಿಯೂ ಹುಡುಕಾಟ ನಡೆಸಲಾಯಿತು. ಆದರೆ, ಅವರು ಪತ್ತೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಅವರ ಪತ್ತೆಗೆ ಎಸ್‍ಐಟಿ ವಿವಿಧ ತಂಡಗಳನ್ನು ರಚಿಸಿದೆ ಎಂದೂ ಹೇಳಲಾಗುತ್ತಿದೆ.

ನಿನ್ನೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗಿನ ಅವಧಿಯಲ್ಲಿ ಹಾಸನದ ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕ ನಿವಾಸದಲ್ಲಿ ಹಾಜರಿರುವಂತೆ ಎಸ್‌ಐಟಿ ಅಧಿಕಾರಿಗಳು ಸೂಚಿಸಿದ್ದರು. ಆದರೆ ಅಧಿಕಾರಿಗಳು ಹೋಗಿ ಏಳು ಗಂಟೆಗಳ ಕಾಲ ಕಾದರೂ ಭವಾನಿ ರೇವಣ್ಣ ಮಾತ್ರ ಅಜ್ಞಾತವಾಗಿಯೇ ಉಳಿದಿದ್ದರು.

ಮತ್ತೊಂದೆಡೆ, ಭವಾನಿ ನಾಪತ್ತೆ ಕುರಿತು ವರದಿ ಸಿದ್ಧಪಡಿಸಿಕೊಂಡಿರುವ ಎಸ್‌ಐಟಿ ತಂಡ, ಭವಾನಿ ರೇವಣ್ಣ ತನಿಖೆಗೆ ಅಸಹಕಾರ ತೋರಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಮೂಲಕ ಜಾಮೀನು ನೀಡದಂತೆ ಕೋರಲು ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News