×
Ad

ರೈತರ ಬೆರಳ ತುದಿಗೆ ರೆಕಾರ್ಡ್ ರೂಂ ತಲುಪಿಸುವುದೇ ‘ಭೂ ಸುರಕ್ಷಾ’ ಅಭಿಯಾನದ ಗುರಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ

► ರಾಜ್ಯದಲ್ಲಿದೆ 100 ಕೋಟಿ ಪುಟ ದಾಖಲೆ ►ಈ ಪೈಕಿ 35.36 ಕೋಟಿ ಪುಟಗಳ ಸ್ಕ್ಯಾನ್

Update: 2025-08-06 00:11 IST

ಬೆಂಗಳೂರು: ಸರಕಾರಿ ಕಚೇರಿಗಳಿಗೆ ಅನಗತ್ಯ ಅಲೆದಾಟ ಸೇರಿದಂತೆ ರೈತರನ್ನು ಶೋಷಿಸುವ ಎಲ್ಲ ವಿಚಾರಗಳಿಗೂ ಶಾಶ್ವತ ಪರಿಹಾರ ನೀಡುವುದು ಹಾಗೂ ಬೆರಳ ತುದಿಗೆ ರೆಕಾರ್ಡ್ ರೂಂ (ಕಂದಾಯ ದಾಖಲೆ) ತಲುಪಿಸುವುದೇ ‘ಭೂ ಸುರಕ್ಷಾ’ ಅಭಿಯಾನದ ಮೂಲ ಧ್ಯೇಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಮಂಗಳವಾರ ನಗರದ ಜಿಲ್ಲಾಡಳಿತ ಕಚೇರಿಯಲ್ಲಿರುವ ರೆಕಾರ್ಡ್ ರೂಂ ದಾಖಲೆಗಳನ್ನು ‘ಭೂ ಸುರಕ್ಷಾ’ ಯೋಜನೆ ಅಡಿಯಲ್ಲಿ ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭೂ ಮಂಜೂರಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಬಚ್ಚಿಡುವ ಹಾಗೂ ತಿದ್ದುವ ಮೂಲಕ ಬಡ ರೈತರನ್ನು ಶೋಷಿಸುವ ಕೆಲಸ ದಶಕಗಳಿಂದಲೂ ನಡೆಯುತ್ತಿದೆ. ಸರಕಾರಿ ಕಚೇರಿ ಹಾಗೂ ಕೋರ್ಟು ಕೇಸು ಅಂತ ಅಲೆಯುವುದೇ ನೈಜ ರೈತರಿಗೆ ತಲೆನೋವಿನ ಕೆಲಸವಾಗಿದೆ. ಮತ್ತೊಂದೆಡೆ ಮಧ್ಯವರ್ತಿಗಳೂ ಸಹ ರೈತರನ್ನು ಇನ್ನಿಲ್ಲದಂತೆ ಶೋಷಿಸುತ್ತಿದ್ದಾರೆ ಎಂದು ಅವರು ದೂರಿದರು.

ಈ ಎಲ್ಲಾ ಶೋಷಣೆಗಳಿಂದ ಅನ್ನದಾತರಿಗೆ ನೆಮ್ಮದಿ ನೀಡಬೇಕು. ರೆಕಾರ್ಡ್ ರೂಂ ಅನ್ನು ಜನರ ಬೆರಳ ತುದಿಗೆ ತರಬೇಕು. ಜನರಿಗೆ ಸಿಗಬೇಕಾದ ಸೌಲಭ್ಯ ಸರಳ ಸುಳಲಿತವಾಗಿ ತೊಂದರೆ ಇಲ್ಲದಂತೆ ಲಭ್ಯವಾಗುವಂತಿರಬೇಕು ಎಂಬುದೇ ನಮ್ಮ ಉದ್ದೇಶ. ಹೀಗಾಗಿಯೇ “ಭೂ ಸುರಕ್ಷಾ” ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಭೂ ದಾಖಲೆಗೆ ಸಂಬಂಧಿಸಿ 100 ಕೋಟಿಗೂ ಅಧಿಕ ಭೂ ದಾಖಲೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 35.36 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ನೂ 35 ಕೋಟಿ ಪುಟಗಳು ಸ್ಕ್ಯಾನ್‍ಗೆ ಬಾಕಿ ಇದೆ. ಈ ಕೆಲಸ ತಹಶೀಲ್ದಾರ್ ಕಚೇರಿಗμÉ್ಟೀ ಸೀಮಿತವಾಗದೆ ಎಸಿ-ಡಿಸಿ ಕಚೇರಿಯಲಿರುವ ದಾಖಲೆಗಳನ್ನೂ ಸ್ಕ್ಯಾನ್ ಮಾಡಲು ನಿರ್ಧರಿಸಲಾಗಿದೆ. ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಈ ಕೆಲಸಕ್ಕೂ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ವಾರಾಂತ್ಯದೊಳಗೆ ಸ್ಕ್ಯಾನಿಂಗ್ ಪೂರ್ಣ:

ರಾಜ್ಯದ ಎಲ್ಲ ತಹಶೀಲ್ದಾರ್ ಕಚೇರಿಗಳಲ್ಲಿ ಪ್ರತಿದಿನ ಸರಾಸರಿಯಾಗಿ 10 ಸಾವಿರ ಪುಟಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆಲಸ ಮತ್ತಷ್ಟು ವೇಗ ಪಡೆಯಲಿದ್ದು, ಮುಂದಿನ ಡಿಸೆಂಬರ್ ಒಳಗೆ ತಹಶೀಲ್ದಾರ್ ಕಚೇರಿಯ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುವುದು. 2026 ಮಾರ್ಚ್ ವೇಳೆಗೆ ಎಸಿ (ಉಪ ವಿಭಾಗಾಧಿಕಾರಿ) ಕಚೇರಿ ರೆಕಾರ್ಡ್ ರೂಂ ಗಳಲ್ಲಿರುವ ದಾಖಲೆಗಳ ಸ್ಕ್ಯಾನಿಂಗ್ ಮುಗಿಸಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಿದ ದಾಖಲೆಗಳನ್ನು ರೈತರು ಸರಕಾರಿ ಕಚೇರಿಗಳಿಗೆ ಅಲೆಯದೆ ಮನೆಯಿಂದಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ರೈತರಿಗೆ ಮೊಬೈಲ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಗೊತ್ತಿಲ್ಲದಿದ್ದರೂ ಅವರು ಇನ್ಮುಂದೆ ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿಲ್ಲ. ಪಕ್ಕದ ನಾಡ ಕಚೇರಿಗೆ ಬೇಕಿದ್ದರೂ ಹೋಗಿ ಅಲ್ಲಿನ ಅಧಿಕಾರಿಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದು. ಈವರೆಗೆ ರಾಜ್ಯಾದ್ಯಂತ 4 ಲಕ್ಷ ದಾಖಲೆಗಳನ್ನು ಹೀಗೆ ಡಿಜಿಟಲ್ ರೂಪದಲ್ಲಿ ಜನರಿಗೆ ನೀಡಿದ್ದೇವೆ. ಜನ ಯಾವ ದಾಖಲೆ ಅರ್ಜಿ ಸಲ್ಲಿಸುತ್ತಾರೆ ಆ ದಾಖಲೆಯನ್ನೇ ಮೊದಲು ಸ್ಕ್ಯಾನ್ ಮಾಡುತ್ತೇವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಉಪಸ್ಥಿತರಿದ್ದರು.


ಭೂ ಮಾಫಿಯಾಗೂ ಪೆಟ್ಟು: ಬೆಂಗಳೂರು ಸುತ್ತಮುತ್ತ ಅನೇಕ ದಾಖಲೆಗಳಲ್ಲಿ ಬೋಗಸ್ ಎಂಟ್ರಿ ಮಾಡಲಾಗಿದೆ. ಈ ಕೃತ್ಯದಲ್ಲಿ ಕೆಲವು ಅಧಿಕಾರಿಗಳ ಕೈವಾಡವೂ ಇದ್ದು, ಸರಕಾರಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗಿದೆ. ಅಲ್ಲದೆ, ಇಂತಹ ನಕಲಿ ದಾಖಲೆಗಳ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸರಕಾರಕ್ಕೂ ಸತತ ಸೋಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಕೆಲವು ಅಧಿಕಾರಿಗಳ ಕುಕೃತ್ಯದಿಂದ ಸಾರ್ವಜನಿಕ ಆಸ್ತಿ ವ್ಯವಸ್ಥಿತವಾಗಿ ಭೂ ದೋಚುವವರ ಪಾಲಾಗಿದೆ. ಇನ್ಮುಂದೆ ಇಂತಹ ಅನಾಹುತ ಆಗದಂತೆ ತಡೆಯಬೇಕು. ಈ ದಂಧೆಗೆ ಭೂ ಸುರಕ್ಷಾ ಯೋಜನೆಯ ಮೂಲಕ ಕಡಿವಾಣ ಹಾಕುತ್ತಿದ್ದೇವೆ. ಹಿಂದೆ ಆಗಿರುವ ನಕಲಿ ವ್ಯವಹಾರಗಳಿಗೆ ಸೋತು ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ದಾಖಲೆಗಳು ನಕಲಿ ಅಂತ ಗೊತ್ತಾದರೆ ಫೊರೆನ್ಸಿಕ್ ವಿಭಾಗಕ್ಕೆ ನೀಡಿ ಅದನ್ನು ತನಿಖೆ ಮಾಡಿ ಸತ್ಯ-ಸುಳ್ಳನ್ನು ಸಾಬೀತು ಮಾಡಬೇಕೆಂದು ಅಧಿಕಾರಿಗಳಿಗೆ ಹೇಳಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News