×
Ad

ಮಹದಾಯಿ, ಕೃಷ್ಣಾ-ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಬಿಜೆಪಿ ಮೌನ : ಡಿ.ಕೆ.ಶಿವಕುಮಾರ್ ವಾಗ್ದಾಳಿ

Update: 2025-12-16 16:36 IST

ಬೆಳಗಾವಿ : ನಾವು ಅಧಿವೇಶನ ಕರೆದಿರುವುದೆ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು. ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಪ್ರತಿಪಕ್ಷ ಬಿಜೆಪಿ ಯಾಕೆ ಮಾತನಾಡದೆ ಮೌನವಹಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಮಂಗಳವಾರ ಬೆಳಗಾವಿಯ ಸಾಂಬ್ರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರಕಾರ ರಾಜ್ಯದ ನೀರಾವರಿ ಯೋಜನೆಗೆ ಘೋಷಿಸಿದ ಅನುದಾನ ಇಲ್ಲಿಯವರೆಗೂ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ನೀಡಿಲ್ಲ, ಮಹದಾಯಿ ವಿಚಾರವಾಗಿ ಅನುಮತಿ ನೀಡಿಲ್ಲ, ಬಿಜೆಪಿ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ? ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆ ಹೊರಡಿಸಿಲ್ಲ. ಇವುಗಳ ಬಗ್ಗೆ ಯಾಕೆ ಅವರು ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ನಮಗೆ ಬದ್ಧತೆ ಇದೆ. ಕೇಂದ್ರ ಸರಕಾರ ಜಿಎಸ್‍ಟಿ ಪರಿಷ್ಕರಣೆ ಮೂಲಕ ರಾಜ್ಯದ ಆದಾಯ ಕಡಿಮೆ ಮಾಡಿದೆ. ವಾರ್ಷಿಕ 10-15 ಸಾವಿರ ಕೋಟಿ ರೂ. ಕೊರತೆಯಾಗಿದೆ. ನಾವು ಕೊಟ್ಟ ಮಾತಿಗೆ ಬದ್ಧವಾಗಿದ್ದೇವೆ. ಒಂದೆರಡು ತಿಂಗಳು ಹೆಚ್ಚು ಕಮ್ಮಿಯಾಗಲಿದೆ. ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿ ಎಂದು ಹೇಳಿದರು.

ರಾಜ್ಯ, ಸಮಾಜದ ಹಿತಕ್ಕೆ ದ್ವೇಷ ಭಾಷಣ ನಿಷೇಧ ಕಾಯ್ದೆ:

ದ್ವೇಷ ಭಾಷಣ ನಿಷೇಧ ಕಾಯ್ದೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ನಮ್ಮದು ನಾಗರಿಕ ಸಮಾಜ. ಇಲ್ಲಿ ದ್ವೇಷ ಮಾಡಬಾರದು. ದ್ವೇಷ, ಗಲಾಟೆ ಮೂಲಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಬಾರದು ಎಂಬ ದೃಷ್ಟಿಯಿಂದ ಕಾನೂನು ತರಲಾಗುತ್ತಿದೆ. ಇದರಿಂದ ರಾಜ್ಯ ಹಾಗೂ ಸಮಾಜಕ್ಕೆ ಒಳ್ಳೆಯದಾಗಲಿದೆ ಎಂದರು.

ಮತಕಳ್ಳತನ ವಿರುದ್ಧದ ಪ್ರತಿಭಟನೆ ಯಶಸ್ವಿ:

ಮತಕಳ್ಳತನ ವಿರುದ್ಧದ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ಧ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು. ಮತಕಳ್ಳತನದಿಂದ ಆಗುತ್ತಿರುವ ಅನ್ಯಾಯ ತಡೆಯಬೇಕು ಎಂದು ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೇ ನಮ್ಮ ಯಶಸ್ಸು ಎಂದರು.

ನಾವು ಅನೇಕ ಕಾರ್ಯಕರ್ತರಿಗೆ ಅಧಿಕಾರವನ್ನೆ ಕೊಟ್ಟಿಲ್ಲ. ಆದರೂ ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಿಕೊಂಡು ದಿಲ್ಲಿಗೆ ಬಂದು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನಾಯಕತ್ವಕ್ಕೆ ಬೆಂಬಲ ನೀಡಿದ್ದಾರೆ. ಈ ಮೂಲಕ ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದಾರೆ ಎಂದು ಅವರು ಹೇಳಿದರು.

ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಸಬೇಕು ಎಂದು ಪ್ರಿಯಾಂಕಾ ಗಾಂಧಿ ಸಂದೇಶ ನೀಡಿದ್ದಾರೆ. ಪ್ರತಿಭಟನೆ ಯಶಸ್ವಿಯಾಯಿತು. ಕರ್ನಾಟಕದ ಮೂಲೆ, ಮೂಲೆಯಿಂದ ಬಂದ ಕಾರ್ಯಕರ್ತರು, ಮುಖಂಡರಿಗೆ ಪಕ್ಷದ ಪರವಾಗಿ ಧನ್ಯವಾದಗಳು ಎಂದು ಶಿವಕುಮಾರ್ ತಿಳಿಸಿದರು.

ದಿಲ್ಲಿಯಲ್ಲಿ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಭೇಟಿಯಾಗಿದ್ದನ್ನು, ಕುಶಲೋಪರಿ ವಿಚಾರಿಸುವುದನ್ನು ಫೋಟೋಗಳಲ್ಲಿ ನೀವುಗಳೂ ನೋಡಿದ್ದೀರಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News