ಜ.27ಕ್ಕೆ ಭುವನೇಶ್ವರಿ ಪ್ರತಿಮೆ ಅನಾವರಣ : ಶಿವರಾಜ್ ತಂಗಡಗಿ
ಬೆಂಗಳೂರು : ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನಸೌಧದ ಪಶ್ಚಿಮದ್ವಾರದಲ್ಲಿ ನಿರ್ಮಿಸಲಾಗಿರುವ 25 ಅಡಿ ಎತ್ತರದ ಭುವನೇಶ್ವರಿ ಕಂಚಿನ ಪ್ರತಿಮೆ ಜ.27ರಂದು ಅನಾವರಣಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜ.27ರಂದು ಸಂಜೆ 4.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಪ್ರತಿ ದಿನವೂ ಭುವನೇಶ್ವರಿಗೆ ಅರ್ಚನೆ ನಡೆಯಲಿದೆ ಎಂದರು.
ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ, ಚಾಲುಕ್ಯ, ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಹೊಯ್ಸಳ ಲಾಂಛನ, ವೈಜಯಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ಇರಲಿದೆ ಎಂದು ಶಿವರಾಜ್ ತಂಗಡಗಿ ವಿವರಿಸಿದರು.
ಪ್ರತಿಮೆಯ ಸುತ್ತಲೂ ಉದ್ಯಾನವನ, ಆವರಣದ ಸುತ್ತಲೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮದ ದ್ವಾರಕ್ಕೆ ಇರುವ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆಂದೇ ಪಶ್ಚಿಮಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಇರಲಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ಪ್ರತಿಮೆ ಅನಾವರಣದ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ 4 ದಿಕ್ಕುಗಳಿಂದ ಮೆರವಣಿಗೆ ಆಗಮಿಸಲಿದ್ದು, ಜ್ಞಾನಪೀಠ ಪುರಸ್ಕೃತರು ಹಾಗೂ ನಾಡಿನ ಹೆಸರಾಂತ ಮಹನೀಯರ ಫೋಟೋಗಳನ್ನು ಇಡಲಾದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಲಿದೆ ಎಂದು ಶಿವರಾಜ್ ತಂಗಡಗಿ ಹೇಳಿದರು.
ಪೂರ್ವ ದಿಕ್ಕಿನಿಂದ (ಇಂದಿರಾ ನಗರ): ಪಂಪ, ರನ್ನ, ಪೊನ್ನ, ಜನ್ನ, ಸರ್.ಎಂ.ವಿಶ್ವೇಶ್ವರಯ್ಯ, ಸರ್ ಸಿ.ವಿ. ರಾಮನ್, ಸಿ.ಎನ್.ಆರ್.ರಾವ್, ಭೀಮ್‍ಸೇನ್ ಜೋಷಿ, ಡಾ.ರಾಜ್‍ಕುಮಾರ್, ಎಸ್. ನಿಜಲಿಂಗಪ್ಪ, ಶಿವಕುಮಾರ ಸ್ವಾಮೀಜಿ, ದೇ.ಜವರೇಗೌಡ, ಡಾ.ವಿರೇಂದ್ರ ಹೆಗಡೆ, ಡಾ.ಪುನೀತ್ ರಾಜ್‍ಕುಮಾರ್ ಅವರ ಫೋಟೋವಿರುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಲಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ಪಶ್ಚಿಮ ದಿಕ್ಕು: (ಕೆಂಗೇರಿ ಉಪನಗರ): ಜ್ಞಾನಪೀಠ ಪ್ರಶಸ್ತಿ ಪುರಸ್ಕತರು ಹಾಗೂ ರಾಷ್ಟ್ರಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಅಯ್ಯಾಂಗಾರ್, ವಿ.ಕೃ. ಗೋಕಾಕ್, ಡಾ.ಯು.ಆರ್.ಅನಂತ ಮೂರ್ತಿ, ಡಾ.ಗಿರೀಶ್ ಕಾರ್ನಾಡ್, ಡಾ.ಚಂದ್ರಶೇಖರ ಕಂಬಾರ, ಮಂಜೇಶ್ವರ ಗೋವಿಂದ ಪೈ, ಡಾ.ಜಿ.ಎಸ್.ಶಿವರುದ್ರಪ್ಪ ಅವರ ಫೋಟೋ ಮೆರವಣಿಗೆಯಲ್ಲಿ ಬರಲಿದೆ ಎಂದು ಶಿವರಾಜ್ ತಂಗಡಗಿ ಹೇಳಿದರು.
ಉತ್ತರ ದಿಕ್ಕು (ಹೆಬ್ಬಾಳ): ಈ ದಿಕ್ಕಿನಿಂದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು, ಗಂಗರು, ಮೈಸೂರು ರಾಜ್ಯರ ಲಾಂಛನ ಹಾಗೂ ಹಲ್ಮಿಡಿ ಶಾಸನದ ಪ್ರತಿರೂಪ ಇರಲಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ದಕ್ಷಿಣ ದಿಕ್ಕು (ಬಸವನಗುಡಿ ಬುಲ್ ಟೆಂಪಲ್): ಈ ದಿಕ್ಕಿನಿಂದ ಸಾಂಸ್ಕೃತಿಕ ನಾಯಕ ಬಸವಣ್ಣ, ಕನಕದಾಸರು, ಪುರಂದರದಾಸರು, ಸಂಚಿ ಹೊನ್ನಮ್ಮ, ದಾನ ಚಿಂತಾಮಣಿ ಅತ್ತಿಮಬ್ಬೆ, ಅಕ್ಕಮಹಾದೇವಿ, ಕುಮಾರವ್ಯಾಸ, ಸಂತ ಶಿಶುನಾಳ ಷರೀಫ, ರೆವರೆಂಡ್ ಎಫ್.ಕಿಟ್ಟೆಲ್, ಬಿ.ಎಲ್.ರೈಸ್ ಅವರ ಪಲ್ಲಕ್ಕಿ ಬರಲಿದ್ದು, ನಾಲ್ಕು ದಿಕ್ಕುಗಳಿನಿಂದ ಮೆರವಣಿಗೆ ಸಾಗಿ ಅಂತಿಮವಾಗಿ ನಾಡದೇವಿ ಭುವನೇಶ್ವರಿ ಪ್ರತಿಮೆ ಇರುವ ವಿಧಾನಸೌಧದ ಬಳಿ ತಲುಪಲಿವೆ ಎಂದು ಶಿವರಾಜ್ ತಂಗಡಗಿ ವಿವರಿಸಿದರು.
ಹತ್ತಾರು ಕಲಾ ತಂಡಗಳು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಾಡದೇವಿ ಭುವನೇಶ್ವರಿ ಪ್ರತಿಮೆ ಅನಾವರಣದ ಬಳಿಕ ಕನ್ನಡ ಗೀತೆಗಳ ಕಾರ್ಯಕ್ರಮ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.