×
Ad

ಬೃಹತ್ ‘ಉದ್ಯೋಗ ಮೇಳ’ಕ್ಕೆ ತೆರೆ: ಉದ್ಯೋಗ ಖಾತರಿಗೆ ಖುಷಿಪಟ್ಟ ಆಕಾಂಕ್ಷಿಗಳು

Update: 2024-02-27 20:48 IST

ಬೆಂಗಳೂರು : ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್‍ಡಿಸಿ) ಆಯೋಜಿಸಿದ್ದ ‘ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳಕ್ಕೆ ಮಂಗಳವಾರ ತೆರೆ ಬಿದ್ದಿದೆ.

ಎರಡು ದಿನಗಳ ಕಾಲ ನಡೆದ ಈ ಬೃಹತ್ ಉದ್ಯೋಗ ಮೇಳದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಉದ್ಯೋಗಕಾಂಕ್ಷಿಗಳು ಭಾಗಿಯಾಗಿ ಕೆಲಸಗಳಿಗೆ ನೋಂದಣಿ ಮಾಡಿಕೊಂಡರು. ಈ ಪೈಕಿ ಸಾವಿರಾರು ಆಕಾಂಕ್ಷಿಗಳು ಸ್ಥಳದಲ್ಲಿಯೇ ಹಲವು ಕಂಪೆನಿಗಳ ನೇಮಕ ಪತ್ರ ಪಡೆದುಕೊಂಡು ಸಂಭ್ರಮಿಸಿದರು.

ಸಾಗರದಂತೆ ಹರಿದು ಬಂದ ಯುವಜನರು: ಬೆಂಗಳೂರು, ಕೋಲಾರ, ಮಂಡ್ಯ, ಶಿವಮೊಗ್ಗ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಗದಗ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಮೈಸೂರು, ಉಡುಪಿ, ಮಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಬಂದ ಯುವಜನರು ಉದ್ಯೋಗ ಪಡೆದುಕೊಂಡು ಖುಷಿಯನ್ನು ಹಂಚಿಕೊಂಡರು. ಇಲಾಖೆಯಿಂದಲೇ ಎಲ್ಲರಿಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿಕಲಚೇತನರಿಗೆ ಸಮಸ್ಯೆಯಾಗದಂತೆ ಪ್ರತ್ಯೇಕ ನೋಂದಣಿ ಕೇಂದ್ರ, ಸಾರಿಗೆ ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿತ್ತು.

617 ಕಂಪೆನಿಗಳಲ್ಲಿ 90ಸಾವಿರಕ್ಕೂ ಹೆಚ್ಚು ನೋಂದಣಿ: ಉದ್ಯೋಗ ಮೇಳದ ಕುರಿತು ವಿವರಿಸಿದ ಕೆಎಸ್‍ಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಆರ್.ಕೃಷ್ಣಕುಮಾರ್, ‘ಈ ಮೇಳಕ್ಕೆ ಸುಮಾರು 617 ಕಂಪೆನಿಗಳು ಬಂದಿವೆ. ಐಟಿ ಸೆಕ್ಟರ್, ಹಾಸ್ಪಿಟಾಲಿಟಿ, ಅಗ್ರಿಕಲ್ಚರ್, ಏರೋಸ್ಪೇಸ್, ಫೈನಾನ್ಸ್, ಬ್ಯಾಂಕಿಂಗ್ ಸೇರಿದಂತೆ ಸುಮಾರು 36 ವಲಯಗಳ ಕಂಪೆನಿಗಳು ಪಾಲ್ಗೊಂಡಿವೆ. ಸುಮಾರು 1,38,000 ಉದ್ಯೋಗವಕಾಶಗಳು ಇಲ್ಲಿವೆ. 90ಸಾವಿರಕ್ಕೂ ಹೆಚ್ಚು ಯುವಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೇಳದಲ್ಲಿ ನೆರೆದಿದ್ದ ಯುವಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ‘ರಾಜ್ಯ ಸರಕಾರ ನಿರುದ್ಯೋಗಿಗಳ ನೋವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಉದ್ಯೋಗದಾತರನ್ನು ಒಂದೇ ಸೂರಿನಡಿಯಲ್ಲಿ ಕೂಡಿ ಹಾಕಿ ಕೆಲಸ ನೀಡುತ್ತಿರುವುದು ಹೆಮ್ಮೆಯ ವಿಚಾರ. ದೇಶವ್ಯಾಪಿಯಲ್ಲೂ ಈ ರೀತಿಯ ಕಾರ್ಯವಾಗಬೇಕು ನಿರುದ್ಯೋಗಿಗಳ ಸಂಖ್ಯೆ ಕ್ಷೀಣಿಸಿ ದೇಶವೂ ಅಭಿವೃದ್ಧಿ ಹೊಂದುತ್ತದೆ. ಕರ್ನಾಟಕ ಸರಕಾರ ಕನಿಷ್ಠ ಆರು ತಿಂಗಳಿಗೊಮ್ಮೆಯಾದರೂ ಈ ರೀತಿಯ ಮೇಳಗಳನ್ನು ಆಯೋಜಿಸುವಂತಾಗಬೇಕು ಎಂಬುದು ನನ್ನ ಕೋರಿಕೆ’ ಎನ್ನುತ್ತಾರೆ ಬೆಂಗಳೂರಿನ ವೆಂಕಟೇಶ್.

ಇಂದಿನ ಕೆಲಸಗಳಿಗೆ ಬೇಕಾದ ಕೌಶಲ್ಯಗಳನ್ನು ನಮ್ಮ ಸಂಸ್ಥೆ ರೂಪಿಸುತ್ತದೆ. ಕೆಎಸ್‍ಡಿಸಿಗೆ ಧನ್ಯವಾದವನ್ನು ಹೇಳಲೇಬೇಕು. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ಕೆಲಸ ಬೇಕಾಗಿರುವ ತುಂಬಾ ಜನರು ನಮ್ಮನ್ನು ಭೇಟಿಯಾಗಿದ್ದಾರೆ. ಅನೇಕರಿಗೆ ಶಾರ್ಟ್ ಲೀಸ್ಟ್ ಲೆಟರ್ ಮತ್ತು ಆಫರ್ ಲೆಟರ್ ಕೊಟ್ಟಿದ್ದೇವೆ ಎನ್ನುತ್ತಾರೆ ‘ಪೀಪಲ್ ಎಡ್ಜ್’ ಸಂಸ್ಥೆಯ ಟ್ರೈನಿಗಳ ಹೆಡ್ ಅರುಣ್ ಬಾಪು.

ಎರಡು ದಿನವೂ ನಾನು ಮೇಳದಲ್ಲಿ ಪಾಲ್ಗೊಂಡಿರುವೆ. ಮೊದಲ ದಿನ ಐದು ಕಂಪನಿಗಳಿಗೆ ಅರ್ಜಿ ಹಾಕಿದ್ದೆ. ಆದರೆ ಆಯ್ಕೆ ಆಗಿರಲಿಲ್ಲ. ಪಟ್ಟು ಬಿಡದೆ ಎರಡನೇ ದಿನವೂ ಪ್ರಯತ್ನಿಸಿದೆ. ಪೂಜ್ಯಾಯ ಸೆಕ್ಯುರಿಟಿ ಸರ್ವೀಸ್‍ನಲ್ಲಿ ಅಕೌಂಟೆಂಟ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಸಿಕ್ಕಿದೆ. ಉದ್ಯೋಗ ಮೇಳ ಆಯೋಜಿಸಿದ್ದಕ್ಕೆ ಧನ್ಯವಾದಗಳು ಎನ್ನುತ್ತಾರೆ ಬೆಂಗಳೂರಿನ ರಮ್ಯಾ.

ನಾನು ಐಟಿಐ ಮುಗಿಸಿ ಎರಡು ವರ್ಷಗಳಿಂದ ಉದ್ಯೋಗಕ್ಕಾಗಿ ಅಲೆಯುತ್ತಿದ್ದೆ. ಯೂಟ್ಯೂಬ್‍ನಲ್ಲಿ ಉದ್ಯೋಗ ಮೇಳದ ಮಾಹಿತಿ ನೋಡಿ ಇಲ್ಲಿಗೆ ಬಂದೆ. ಈಗ ಕೆಲಸ ಸಿಕ್ಕಿರುವುದು ಖುಷಿಯಾಗಿದೆ ಎಂದರು ಕೊಪ್ಪಳ ಜಿಲ್ಲೆಯ ಫಕ್ರುದ್ದೀನ್ ನದಾಫ್.

‘ನಾನು ಬಿಕಾಂ ಮುಗಿಸಿದ್ದೇನೆ. ಎಲ್ಲಾ ಕಡೆ ಕೆಲಸ ಹುಡುಕುತ್ತಿದ್ದೆ. ಆದರೆ ಎಲ್ಲಿಯೂ ಸಿಕ್ಕಿರಲಿಲ್ಲ. ಕೆಎಸ್‍ಡಿಸಿಯಿಂದ ಈಗ ಉದ್ಯೋಗ ದೊರಕಿದೆ. ಅದಕ್ಕಾಗಿ ಆಭಾರಿ ಎಂದು ಸಂತಸಪಟ್ಟರು ಹಲಸೂರಿನ ನಿವಾಸಿ ಅಮೃತಾ.

‘ಡಿಪ್ಲೊಮಾ, ಎಂಜಿನಿಯರಿಂಗ್, ಐಟಿಐ ಕೋರ್ಸ್ ಮುಗಿಸಿದವರನ್ನು ನಾವು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಬಾಗಲಕೋಟೆ, ಜಮಖಂಡಿ ಹೀಗೆ ರಾಜ್ಯದ ಮೂಲೆಮೂಲೆಯಿಂದ ಯುವಜನರು ಬಂದಿದ್ದಾರೆ. ಬಹುತೇಕರು ಅತ್ಯುತ್ತಮ ಅರ್ಹತೆಯನ್ನು ಹೊಂದಿದ್ದಾರೆ. ಉದ್ಯೋಗ ಮೇಳ ನಿಜಕ್ಕೂ ನಿರುದ್ಯೋಗಿಗಳ ಬದುಕಿಗೆ ಬೆಳಕಾದಂತಿದೆ’

ರವಿತೇಜ, ಟಾಟಾ ಕಂಪೆನಿಯ ಪ್ರತಿನಿಧಿ

‘ಕಾಗದ ರಹಿತ ಉದ್ಯೋಗ ಮೇಳ ಇದಾಗಿದೆ. ಪೋರ್ಟಲ್ ಮೂಲಕವೇ ನೋಂದಣಿ ಮಾಡಿಕೊಂಡೆವು. ಅಭ್ಯರ್ಥಿ ಮತ್ತು ಕಂಪೆನಿಗಳ ಮ್ಯಾಪಿಂಗ್ ಮಾಡಿದ್ದೇವೆ. ಈಗಾಗಲೇ 4ಸಾವಿರ ಮಕ್ಕಳು ಶಾರ್ಟ್ ಲೀಸ್ಟ್ ಆಗಿದ್ದಾರೆ. 1,800ಕ್ಕೂ ಹೆಚ್ಚು ಯುವಜನರನ್ನು ನೇರವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇಲ್ಲಿ ಸಂದರ್ಶನಕ್ಕೆ ಹಾಜರಾಗಿರುವ ಕನಿಷ್ಠ ಅರ್ಧದಷ್ಟು ಜನರಿಗೆ ಉದ್ಯೋಗ ಕೊಡಿಸುವ ಪ್ರಯತ್ನ ನಡೆಯುತ್ತಿದೆ’

ಸಿ.ಆರ್.ಕೃಷ್ಣಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕ, ಕೆಎಸ್‍ಡಿಸಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News