ಶಿವಮೊಗ್ಗ: ಮಾಂಸ ಮಾರಾಟಗಾರರಲ್ಲಿ ಗೊಂದಲಕ್ಕೆ ಕಾರಣವಾದ ಪಾಲಿಕೆ ಆಯಕ್ತರ ಆದೇಶ
ಸಾಂದರ್ಭಿಕ ಚಿತ್ರ (PTI)
ಶಿವಮೊಗ್ಗ,: ಸಂತ ಟಿ.ಎಲ್.ವಾಸ್ವಾನಿ ಜನ್ಮದಿನದ ಪ್ರಯುಕ್ತ ನ.25ರಂದು ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಆದೇಶ ಹೊರಡಿಸಿದ್ದು, ಮಾಂಸ ಮಾರಾಟಗಾರರಲ್ಲಿ ಹಾಗೂ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಮಾಂಸ ಮಾರಾಟದ ಮಾಲಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕು. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶನಿವಾರ ಮಾಂಸ ಮಾರಾಟ ಅಂಗಡಿಗಳು ಬಂದ್ ಆಗಿದ್ದವು.
ಮಾಂಸ ಮಾರಾಟ ನಿಷೇ‘ದ ಬಗ್ಗೆ ಪಾಲಿಕೆ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಪಷ್ಟೀಕರಣ ಪಡೆಯಲಾಯಿತು. ಅವರ ಮಾಹಿತಿ ಪ್ರಕಾರ, ಟಿ.ಎಲ್. ವಾಸ್ವಾನಿ ಅವರು ಸಂತರು.ಅವರ ಜನ್ಮ ದಿನದ ಪ್ರಯುಕ್ತ ಮಾಂಸ ಮಾರಾಟ ನಿಷೇಧಿಸಿ ಕಳೆದ ಏಳೆಂಟು ವರ್ಷಗಳ ಹಿಂದೆ ಸರಕಾರಿ ಆದೇಶವಾಗಿದೆ. ಈ ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದರು.
ಯಾರು ಟಿ.ಎಲ್ ವಾಸ್ವಾನಿ:
ಟಿ.ಎಲ್ ವಾಸ್ವಾನಿ ಅವರ ಪೂರ್ಣ ಹೆಸರು ಸಾಧು ಥಾಂವರದಾಸ್ ಲೀಲಾರಂ ವಾಸ್ವಾನಿ. ಲೀಲಾರಾಮ್ ವರಂದೇವಿ ದಂಪತಿ ಪುತ್ರನಾಗಿ 1879ರಲ್ಲಿ ಸಾದು ವಾಸ್ವಾನಿ ಅವರು ಹೈದರಾಬಾದ್ ನ ಸಿಂದ್ ನಲ್ಲಿ (ಸಿಂಧಿ ಕುಟುಂಬ) ಜನಿಸಿದರು. ಶಿಕ್ಷಣದಲ್ಲಿ ಮೀರಾ ಚಳವಳಿಯನ್ನು ಪ್ರಾರಂಭಿಸಿದರು ಮತ್ತು ಸೈಂಟ್ ಮೀರಾ ಶಾಲೆಯನ್ನು ಸ್ಥಾಪಿಸಿದರು. ಉಪನಿಷತ್ಗಳ ನಿಪುಣ ಪ್ರತಿಪಾದಕರಾಗಿ ಮತ್ತು ಬೈಬಲ್ ಮತ್ತು ಕುರ್ಆನ್ನ ನುರಿತ ವ್ಯಾಖ್ಯಾನಕಾರರಾಗಿ ಗುರುತಿಸಲ್ಪಟ್ಟಿದ್ದರು.
ಮಾಂಸ ಮಾರಾಟ ನಿಷೇ‘ದಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ. ದಿನಕ್ಕೆ ಎರಡು ಕ್ವಿಂಟಾಲ್ ಚಿಕನ್ ಮಾಂಸ ಮಾರಾಟವಾಗುತ್ತಿತ್ತು. ಇದರಿಂದ ಜನಸಾಮಾನ್ಯರಿಗೂ ತೊಂದರೆಯಾಗಿದೆ. ಸಾಕಷ್ಟು ಜನರು ಚಿಕನ್ ಮಾಂಸಕ್ಕಾಗಿ ದೂರವಾಣಿ ಕರೆ ಮಾಡಿದ್ದರು.
ರಾಘವೇಂದ್ರ, ಚಿಕನ್ ಮಾಂಸ ಮಾರಾಟಗಾರರು, ಗೋಪಾಳ