×
Ad

ಕಾನೂನು ಸುವ್ಯವಸ್ಥೆ ವಿಚಾರ : ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗ

ಬಳ್ಳಾರಿ ಪ್ರಕರಣ ಸಿಬಿಐಗೆ ವಹಿಸುವ ಬಗ್ಗೆ ಹಾಗೂ ʼದ್ವೇಷ ಭಾಷಣ ಮಸೂದೆʼಗೆ ಸಹಿ ಹಾಕದಂತೆ ಮನವಿ

Update: 2026-01-12 18:51 IST

ಬೆಂಗಳೂರು : ಬಳ್ಳಾರಿ ಗಲಾಟೆ ಪ್ರಕರಣ, ದ್ವೇಷ ಭಾಷಣ, ಅಕ್ರಮ ವಲಸಿಗರಿಗೆ ಪುನರ್ವಸತಿ, ಕಾನೂನು ಸುವ್ಯವಸ್ಥೆ ವಿಚಾರಗಳ ಸಂಬಂಧ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ನಿಯೋಗವು, ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.

ಸೋಮವಾರ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಇಲ್ಲಿನ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಚಾರ, ಬಳ್ಳಾರಿ ಪ್ರಕರಣ ಸಿಬಿಐಗೆ ವಹಿಸುವ ಬಗ್ಗೆ ಹಾಗೂ ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ, ಅಕ್ರಮ ವಲಸಿಗರಿಗೆ ನಿಯಮಬಾಹಿರ ಪುನರ್ವಸತಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿತು. ಈ ವೇಳೆ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವ ಗೋವಿಂದ ಕಾರಜೋಳ, ಶಾಸಕ ಎಸ್.ಆರ್. ವಿಶ್ವನಾಥ್ ಸೇರಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಆರ್.ಅಶೋಕ್, ರಾಜ್ಯವನ್ನು ಗೂಂಡಾ ರಾಜ್ಯದಿಂದ ಕಾಪಾಡಿ ಎಂದು ಮನವಿ ಮಾಡಿದ್ದೇವೆ. ದ್ವೇಷ ಭಾಷಣ ಮಸೂದೆ ಬಗ್ಗೆ ಸರಕಾರ ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ.  ಈ ಮಸೂದೆಗೆ ಸಹಿ ಹಾಕಬೇಡಿ ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮೇಲೆ ಗುಂಡಿನ ದಾಳಿ, ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಹಲ್ಲೆ ಬಗ್ಗೆ ಗಮನಕ್ಕೆ ತಂದಿದ್ದೇವೆ. ಬಳ್ಳಾರಿಯಲ್ಲಿ ಜ.17ಕ್ಕೆ ಬೃಹತ್ ಸಮಾವೇಶ ಮಾಡುತ್ತೇವೆ. ಪ್ರಕರಣ ಹಳ್ಳ ಹಿಡಿಸಲು ರಾಜ್ಯ ಸರಕರ ಹೊರಟಿದ್ದು, ಈ ಸರಕಾರದಿಂದ ನ್ಯಾಯ ಸಿಗಲ್ಲ ಎಂದು ಅವರು ಹೇಳಿದರು.

ಕೋಗಿಲು ಲೇಔಟ್ ವಿಚಾರ ನಮ್ಮ ಸತ್ಯಶೋಧನೆ ಸಮಿತಿ ವರದಿ ಕೊಟ್ಟಿದೆ. ಹಿಂದೆ ಕೇರಳದ ಸಮಸ್ಯೆಗೆ ರಾಜ್ಯ ಸ್ಪಂದಿಸಿದೆ. ಬಾಂಗ್ಲಾದವರ ಪರ ಕೇರಳ ಮುಖ್ಯಮಂತ್ರಿ ದನಿ ಎತ್ತಿದ್ದಾರೆ. ನಮ್ಮ ರಾಜ್ಯದ ಕಾಂಗ್ರೆಸ್ ಸರಕಾರ ಕೇರಳದ ಕೈಗೊಂಬೆ ಆಗಿದೆ. ಕೇರಳದಲ್ಲಿ ಕನ್ನಡ ಭಾಷೆಗೆ ಅಪಮಾನ ಮಾಡಲಾಗಿದೆ. ಮಾತೃಭಾಷೆಗೆ ಅವಕಾಶ ಕೊಡದೇ ದಮನಕಾರಿ ನೀತಿ ಅನುಸರಿಸಿದೆ. ಇಲ್ಲಿನ ಮುಖ್ಯಮಂತ್ರಿ ಒಂದು ಪತ್ರವಷ್ಟೇ ಬರೆದು ಸುಮ್ಮನಾಗಿದ್ದಾರೆ ಎಂದು ಅವರು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News