ಕಾಲ್ತುಳಿತ ದುರಂತ | ಸರಕಾರ ವಜಾಕ್ಕೆ ಆಗ್ರಹಿಸಿ ವಿಧಾನಸೌಧದಲ್ಲಿ ‘ಬಿಜೆಪಿ ಧರಣಿ ಸತ್ಯಾಗ್ರಹ’
ಬೆಂಗಳೂರು: ‘ಆರ್ ಸಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಕಾಂಗ್ರೆಸ್ ಸರಕಾರದ ವೈಫಲ್ಯವೇ ಮೂಲ ಕಾರಣ. 11 ಮಂದಿಯನ್ನು ಬಲಿ ಪಡೆದ ರಾಜ್ಯ ಸರಕಾರವನ್ನು ಕೂಡಲೇ ವಜಾ ಮಾಡಬೇಕು’ ಎಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಇಂದಿಲ್ಲಿ ಧರಣಿ ಸತ್ಯಾಗ್ರಹ ನಡೆಸಿತು.
ರವಿವಾರ ವಿಧಾನಸೌಧದಲ್ಲಿನ ಗಾಂಧಿ ಪ್ರತಿಮೆ ಬಳಿ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಧರಣಿ ನಡೆಸಿದ ಬಿಜೆಪಿ ಮುಖಂಡರು, ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ‘ನಮ್ಮ ಪಕ್ಷದ ಶಾಸಕರೆಲ್ಲರೂ ಸೇರಿ ಧರಣಿ ನಡೆಸಿದರೆ ನಮ್ಮ ಹೋರಾಟ ಹತ್ತಿಕ್ಕಲು ರಾಜ್ಯ ಸರಕಾರ ಪೊಲೀಸರ ಮೂಲಕ ವಿಫಲ ಯತ್ನ ನಡೆಸಿದೆ. ಆರ್‌ಸಿಬಿ ಅಂದರೆ ಅವರೇ ನಿಜವಾದ ಆರೋಪಿಗಳು. ಪೊಲೀಸರ ಆದೇಶವನ್ನು ಧಿಕ್ಕರಿಸಿ ವಿಜಯೋತ್ಸವ ಆಚರಣೆ ಮಾಡಿದ್ದರ ಪರಿಣಾಮ ದುರಂತ ಸಂಭವಿಸಿದೆ’ ಎಂದು ದೂರಿದರು.
ಹಪಾಹಪಿಯಿಂದ ದುರಂತ: ‘ಆರ್‌ಸಿಬಿ ಕಪ್ ಗೆದ್ದ ಹಿನ್ನೆಲೆಯಲ್ಲಿ ಪ್ರಚಾರದ ಹಪಾಹಪಿಗೆ ಬಿದ್ದ ಸರಕಾರ ಕಪ್‍ಗೆ ಮುತ್ತಿಟ್ಟು ದುರಂತಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆ ಭದ್ರತೆ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದರೂ ಕಾರ್ಯಕ್ರಮ ಮಾಡಿದ್ದ ಏಕೇ?. ಇವರಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಪರಿಷತ್ ಸದಸ್ಯ ಸಿ.ಟಿ.ರವಿ, ಕಾಲ್ತುಳಿತ ದುರಂತದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಸಿಎಂ, ಡಿಸಿಎಂ ವಿರುದ್ದ ಎಫ್‍ಐಆರ್ ದಾಖಲಾಗಬೇಕು. ಇವರಿಗೆ ನೈತಿಕತೆ ಇದಿದ್ದರೆ ಇಷ್ಟೊತ್ತಿಗಾಗಲೇ ರಾಜೀನಾಮೆ ನೀಡಿ ಮನೆಗೆ ಹೋಗುತ್ತಿದ್ದರು. ಮಕ್ಕಳನ್ನು ಕಳೆದುಕೊಂಡ ಪೋಷಕರ ಗೋಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಜಾ ಮಾಡುವಂತೆ ಕೋರಿ ನಾಳೆ(ಜೂ.9) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಬಿಜೆಪಿಯಿಂದ ದೂರನ್ನು ನೀಡುತ್ತೇವೆ’
-ಆರ್.ಅಶೋಕ್ ವಿಪಕ್ಷ ನಾಯಕ