ಭಯೋತ್ಪಾದನೆ ವಿರುದ್ಧ ಮೋದಿ ಭಾಷಣ ʼಉತ್ತರನ ಪೌರುಷ ಒಲೆಯ ಮುಂದೆʼ ಎನ್ನುವಂತಿದೆ : ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
ಬಿ.ಕೆ.ಹರಿಪ್ರಸಾದ್
ಬೆಂಗಳೂರು: ಭಯೋತ್ಪಾದನೆ ವಿರುದ್ಧ ಕ್ಯಾಮೆರಾ ಮುಂದೆ ಪ್ರಧಾನಿ ಮೋದಿಯವರ 56 ಇಂಚಿನ ಎದೆಯಲ್ಲಿನ ವೀರಾವೇಶದ ಭಾಷಣ ʼಉತ್ತರನ ಪೌರುಷ ಒಲೆಯ ಮುಂದೆʼ ಎನ್ನುವಂತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, "ಅಮಾಯಕ ಪ್ರವಾಸಿಗರನ್ನು ರಕ್ತದ ಮಡುವಿನಲ್ಲಿ ಕುಟುಂಬದವರನ್ನು ಕಳೆದುಕೊಂಡಿರುವ ಭಾರತೀಯರ ನೋವು, ನೀವು ಕ್ಯಾಮೆರಾ ಮುಂದೆ "ರಕ್ತ ಕುದಿಯುತ್ತಿದೆ" ಎಂದು ಹೇಳುವಷ್ಟು ಸುಲಭವಲ್ಲ ಪ್ರಧಾನಿಗಳೇ. ಭಯೋತ್ಪಾದನೆಯನ್ನು ಬಿತ್ತಿ ಬೆಳೆಸುತ್ತಿರುವ ಪಾಕಿಸ್ತಾನ ಹಾಗೂ ಭಯೋತ್ಪಾದನೆಯನ್ನು ನೀರೆರೆದು ಪೋಷಿಸುತ್ತಿರುವ ಯುದ್ಧದಾಹಿ ದೇಶದ ಅಧ್ಯಕ್ಷನ ಮಾತುಗಳಿಂದ ಯುದ್ದಕ್ಕೆ ವಿರಾಮ ಘೋಷಿಸಿ ಭಾರತೀಯ ಸೇನೆಯ ಪರಾಕ್ರಮ, ವೀರತ್ವ ಹಾಗೂ ಶೌರ್ಯವನ್ನು ಕುಗ್ಗಿಸಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ನರಮೇಧದ ನಂತರ ಇಡೀ ದೇಶವೇ ಶೋಕದಲ್ಲಿರುವಾಗ ಬಿಹಾರದ ಚುನಾವಣೆ ಹೊಸ್ತಲಲ್ಲಿನ ಮೆರವಣಿಗೆಯಲ್ಲಿ, ಕೇರಳದಲ್ಲಿ ನಿಮ್ಮ ಬಹುಕಾಲದ ಸ್ನೇಹಿತ ಅದಾನಿಯ ಬಂದರು ಉದ್ಘಾಟನೆಯಲ್ಲಿ ನಿಮ್ಮ "ರಕ್ತ ಕುದಿಯಲಿಲ್ಲ" ಯಾಕೆ?. ನಿಮ್ಮ ಪೊಳ್ಳು ಭಾಷಣ, ಐಲುತನದ ನಿರ್ಧಾರಗಳಿಂದ ವಿಶ್ವದ ಎದುರು ಭಾರತದ ಗೌರವಕ್ಕೆ ಚ್ಯುತಿ ಬರುತ್ತಿದೆ. ನೀವು ದೇಶಕ್ಕೆ ಉತ್ತರದಾಯಿಯೇ ಹೊರತು, ಸಿದ್ದ ಮಾದರಿಯ ಟೆಲಿಪ್ರಾಂಪ್ಟರ್ ನ ಕ್ಯಾಮೆರಾ ಮುಂದೆ ಅಲ್ಲ ಎಂದು ಹೇಳಿದ್ದಾರೆ.