ಕೇಂದ್ರ ಸರಕಾರದಿಂದ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಜನಗಣತಿ : ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್
ಬೆಂಗಳೂರು : ಜನಗಣತಿಯೊಂದಿಗೆ ಜಾತಿ ಗಣತಿಯನ್ನು ನಡೆಸುವುದಾಗಿ ಘೋಷಿಸಿದ್ದ ಕೇಂದ್ರ ಸರಕಾರವು, ಈಗ ಜನಗಣತಿ ಸಂಬಂಧ ಹೊರಡಿಸಿರುವ ಅಧಿಸೂಚನೆಯಲ್ಲಿ ಎಲ್ಲಿಯೂ ಜಾತಿಗಣತಿಯನ್ನು ನಮೂದಿಸಿಲ್ಲ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧ ನಡೆಯುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೀಸ್‍ಫೈರ್(ಕದನ ವಿರಾಮ) ಮಾಡಿಸಿದರು. ಈಗ ಜಾತಿ ಗಣತಿಗೆ ನಾಗ್ಪುರದವರು(ಆರೆಸ್ಸೆಸ್) ಸೀಸ್‍ಫೈರ್ ಮಾಡಿಸಿರಬಹುದು ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಒತ್ತಾಯದ ಮೇರೆಗೆ ಕೇಂದ್ರ ಸರಕಾರ ಜಾತಿ ಗಣತಿಯನ್ನು ಘೋಷಿಸಿತು. ಆದರೆ, ಈ ಬಗ್ಗೆ ನಾಗ್ಪುರ ವಿಶ್ವವಿದ್ಯಾಲಯದಿಂದ ಒತ್ತಡ ಬಂದ ಮೇಲೆ ಕೇಂದ್ರ ಸರಕಾರ ತನ್ನ ಅಧಿಸೂಚನೆಯಲ್ಲಿ ಜನಗಣತಿಯನ್ನು ಮಾತ್ರ ಉಲ್ಲೇಖಿಸಿದೆ. ಜಾತಿ ಗಣತಿಯನ್ನು ನಮೂದಿಸಿಲ್ಲ ಎಂದು ಅವರು ಆರೋಪಿಸಿದರು.
1931ರಲ್ಲಿ ಬ್ರಿಟಿಷರು ಇರುವಾಗ ದೇಶದಲ್ಲಿ ಜಾತಿ ಗಣತಿ ಆಯಿತು. ಸ್ವಾತಂತ್ರ್ಯ ಬಂದ ನಂತರ ಕೇವಲ ಎಸ್ಸಿ, ಎಸ್ಟಿಯವರ ಜನಸಂಖ್ಯೆಯನ್ನು ಪತ್ತೆಹಚ್ಚಲು ಮಾತ್ರ ಜಾತಿ ಗಣತಿ ಆಗಿದೆ. ಎಲ್ಲ ಸಮುದಾಯಗಳಿಗೂ ಅವರ ಹಕ್ಕುಗಳನ್ನು ನೀಡಲು, ಸಾಮಾಜಿಕ ನ್ಯಾಯ ಕಲ್ಪಿಸಲು ಜಾತಿಗಣತಿ ಅಗತ್ಯವಾಗಿದೆ ಎಂದು ಹರಿಪ್ರಸಾದ್ ಪ್ರತಿಪಾದಿಸಿದರು.
ಸಮಾಜದಲ್ಲಿ ಬಡವರು, ಹಿಂದುಳಿದ ವರ್ಗದವರು, ಅಲಕ್ಷಿತರು, ಆದಿವಾಸಿಗಳು, ಅಲೆಮಾರಿ ಜನ ಸಮುದಾಯಗಳು ಇವೆ. ಅವರಿಗೆ ಬಜೆಟ್‍ನಲ್ಲಿ ಕಾರ್ಯಕ್ರಮಗಳನ್ನು ನೀಡಲು ದತ್ತಾಂಶಗಳು ಅಗತ್ಯ. ಇಲ್ಲದಿದ್ದರೆ, ಅವರ ಕಲ್ಯಾಣಕ್ಕೆ ಕಾರ್ಯಕ್ರಮಗಳನ್ನು ರೂಪಿಸಲು ಆಗುವುದಿಲ್ಲ. ನಾವು ಜಾತಿಗಣತಿ ಮಾಡಿದಾಗ ಮುಂದುವರಿದ ಸಮುದಾಯಗಳು ಜನಸಂಖ್ಯೆ ವಿಚಾರದಲ್ಲಿ ಪ್ರಶ್ನೆಗಳನ್ನು ಮುಂದಿಟ್ಟಿವೆ ಎಂದು ಅವರು ಹೇಳಿದರು.
ತಲೆ ಎಣಿಕೆಗೂ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗಳ ಕುರಿತ ಸಮೀಕ್ಷೆಗೂ ವ್ಯತ್ಯಾಸವಿದೆ. ಸಿದ್ದರಾಮಯ್ಯ ಸರಕಾರ ಮಾಡಿರುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ. ಈಗ ನಡೆಸಲು ಮುಂದಾಗಿರುವುದು ಎರಡನೇ ಸಮೀಕ್ಷೆ. ಕಾಂತರಾಜ ಹಾಗೂ ಜಯಪ್ರಕಾಶ್ ಆಯೋಗದ ವರದಿಯನ್ನು ಯಾರೂ ಅವೈಜ್ಞಾನಿಕ ಎಂದು ಹೇಳಿಲ್ಲ ಎಂದು ಹರಿಪ್ರಸಾದ್ ಹೇಳಿದರು.
ಜಾತಿ ಗಣತಿ ಮಾಡಿ ದತ್ತಾಂಶ ಹೊರಗಡೆ ತರುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವೆ. ಅದರಿಂದ ವಿಮುಖರಾಗಲು ಸಾಧ್ಯವಿಲ್ಲ. ಮೂರು ತಿಂಗಳಲ್ಲಿ ಈ ಎರಡನೆ ಸಮೀಕ್ಷೆ ಮುಗಿಯಲಿದೆ. ಹೈಕಮಾಂಡ್ ಮಧ್ಯಪ್ರವೇಶ ಮಾಡಿರುವುದರಿಂದ ಆದಷ್ಟು ಬೇಗ ಈ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
170 ಕೋಟಿ ರೂ.ಗಳನ್ನು ಖರ್ಚು ಮಾಡಿ ಮಾಡಿರುವ ಕಾಂತರಾಜ ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಹಾಕಲು ಆಗುವುದಿಲ್ಲ. ರಾಜ್ಯದಲ್ಲಿ ಜನ ಸಮುದಾಯಗಳಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಹಾವನೂರು, ಕಾಂತರಾಜ, ಜಯಪ್ರಕಾಶ್ ಹೆಗಡೆ ಆಯೋಗದ ವರದಿಯಲ್ಲಿನ ದತ್ತಾಂಶಗಳನ್ನು ಇಟ್ಟುಕೊಂಡೆ ಮಾಡಬೇಕಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಸರಕಾರವು ತಲೆ ಏಣಿಕೆ ಮಾಡಲಿ, ನಾವು ಮಾಡುತ್ತೇವೆ. ಆಗ ಎಲ್ಲವೂ ಬಹಿರಂಗವಾಗುತ್ತದೆ. ಕೆಲವು ನಾಯಕರ ರಾಜಕೀಯ ಪ್ರವೃತ್ತಿ ಸಾಮಾಜಿಕ ನ್ಯಾಯದ ವಿಷಯದಲ್ಲಿ ಸರಿಯಿಲ್ಲ. 11 ವರ್ಷಗಳಿಂದ ನೋಡುತ್ತಿದ್ದೇವೆ. ಬಡವರು, ರೈತರು, ಮಹಿಳೆಯರ ಬಗ್ಗೆ ಪ್ರಧಾನಮಂತ್ರಿ ಮನ್ ಕೀ ಬಾತ್ ನಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ ನೋಡಿ ಎಂದು ಅವರು ಹೇಳಿದರು.
ಇವರ ಕಾರ್ಯಕ್ರಮಗಳು ಏನೆ ಇದ್ದರೂ ಇಂಡಿಯಾ-ಪಾಕಿಸ್ತಾನ, ಹಿಂದೂ-ಮುಸ್ಲಿಮ್, ಮಚಲಿ-ಮಟನ್-ಮುಜ್ರಾ-ಮಂಗಳಸೂತ್ರ ಎಂದು ಓಡಾಡುತ್ತಾರೆ. ನೈಜ್ಯರೂಪದಲ್ಲಿ ಒಂದೇ ಒಂದು ಕಾರ್ಯಕ್ರಮ ಕೊಡಲು ಬಿಜೆಪಿಯವರಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುವ ಯಾವುದೇ ನೈತಿಕತೆಯೂ ಅವರಿಗಿಲ್ಲ ಎಂದು ಹರಿಪ್ರಸಾದ್ ತಿಳಿಸಿದರು.
‘ದ್ವೇಷ ಭಾಷಣ’ ಕಾಟಾಚಾರದ ಎಫ್‍ಐಆರ್‌ನಿಂದ ಪ್ರಯೋಜನವಿಲ್ಲ: ದ್ವೇಷ ಭಾಷಣದ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್ ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಸ್ಪೀಕರ್ ಹೇಳಿರುವುದು ನಿಜ. ಈ ವಿಚಾರವನ್ನು ಸ್ವಯಂಪ್ರೇರಿತವಾಗಿ ಜನರ ಸಭೆಯಾಗಿರುವ ವಿಧಾನಸಭೆಗೆ ತರಬಹುದಾಗಿತ್ತು. ಯಾವ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಿಲ್ಲವೋ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು.
ದ್ವೇಷ ಭಾಷಣ ಮಾಡಿದವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಎಫ್‍ಐಆರ್ ಕಾಟಾಚಾರಕ್ಕೆ ಮಾಡುವುದಲ್ಲ. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಯಾವ ಯಾವ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ನಮೂದಿಸಿ ಎಫ್‍ಐಆರ್ ಮಾಡಿದಾಗ ಮಾತ್ರ ಶಿಕ್ಷೆಯಾಗುತ್ತದೆ. ಇಲ್ಲದಿದ್ದರೆ, ಅವರಿಗೆ ಜಾಮೀನು ನೀಡಲು ಹೈಕೋರ್ಟ್‍ನಲ್ಲಿ ಸಿದ್ಧವಾಗಿ ಕೂತಿದ್ದಾರೆ. ಈ ಬಾರಿ ಆ ರೀತಿಯಾದರೆ ನಾವು ಸುಪ್ರೀಂಕೋರ್ಟ್‍ಗೆ ಹೋಗಬೇಕಾಗುತ್ತದೆ ಎಂದು ಹರಿಪ್ರಸಾದ್ ಹೇಳಿದರು.
ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಸೀಮಿತವಾಗಿ ರಚಿಸಲಾಗಿರುವ ಕೋಮು ನಿಗ್ರಹ ಪಡೆಗೆ ಸಂಪೂರ್ಣ ಶಕ್ತಿ ತುಂಬಿಸಿದರೆ ಪರಿಣಾಮಕಾರಿಯಾಗಿ ಕೆಲಸ ಆಗುತ್ತದೆ ಎಂದು ಅವರು ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಧರಣಿ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಂಬೈ, ಪುಣೆಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಜನ ಸಾವನ್ನಪ್ಪಿದರು. ಅಹಮದಾಬಾದ್ ವಿಮಾನ ದುರಂತದಲ್ಲಿ ನೂರಾರು ಮಂದಿ ಮೃತಪಟ್ಟರು ಎಂದು ಹೇಳಿದರು.
ಬಿಜೆಪಿಯವರು ಧರಣಿ ಮಾಡಬೇಕಾದರೆ ಕೇಂದ್ರ ಸಚಿವ ಅಮಿತ್ ಶಾ ಅವರ ಪುತ್ರ ಬಿಸಿಸಿಐ ಅಧ್ಯಕ್ಷನ ಮನೆ ಮುಂದೆ ಧರಣಿ ಮಾಡಲಿ. ಕಾಲ್ತುಳಿತದಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ತಲಾ ಐದು ಕೋಟಿ ರೂ.ಪರಿಹಾರ ನೀಡಲಿ ಎಂದು ಅವರು ಒತ್ತಾಯಿಸಿದರು.
ಡಿಸೆಂಬರ್ ವರೆಗೆ ಸಂಪುಟ ವಿಸ್ತರಣೆ ಇಲ್ಲ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಬಿ.ನಾಗೇಂದ್ರ ಅವರ ಜಾಗಕ್ಕೆ ಬೇರೆಯವರನ್ನು ಕರೆತರುವ ಬಗ್ಗೆ ಯಾವುದೇ ಚರ್ಚೆ ಹೈಕಮಾಂಡ್ ಮಟ್ಟದಲ್ಲಿ ನಡೆದಿಲ್ಲ. ಅಲ್ಲದೇ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಇದ್ಯಾವುದು ನವೆಂಬರ್, ಡಿಸೆಂಬರ್ ವರೆಗೆ ಆಗುವುದಿಲ್ಲ ಎಂದು ಹರಿಪ್ರಸಾದ್ ಹೇಳಿದರು.
ನಾನು ಮಂತ್ರಿ ಮಾಡಿ ಎಂದು ಯಾರ ಬಳಿಯೂ ಕೇಳಿಲ್ಲ. ಮುಖ್ಯಮಂತ್ರಿ ನನ್ನ ಮನೆಗೆ ಭೇಟಿ ನೀಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗುತ್ತಿರುವ ಅಮಾಯಕರ ಕೊಲೆಗಳನ್ನು ಯಾವ ರೀತಿ ನಿಲ್ಲಿಸಬಹುದು, ಅಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಏನೆಲ್ಲ ಮಾಡಬಹುದು ಎಂಬುದರ ಕುರಿತು ಚರ್ಚೆ ನಡೆಸಲು ಎಂದು ಅವರು ತಿಳಿಸಿದರು.