×
Ad

ಮಂಡಲ್ ಆಯೋಗದ ಶಿಫಾರಸ್ಸು ಜಾರಿಯಾಗಬಾರದೆಂದು ಪ್ರಬಲವಾಗಿ ವಿರೋಧ ಮಾಡಿದ್ದೇ ಬಿಜೆಪಿ : ಬಿ.ಕೆ.ಹರಿಪ್ರಸಾದ್‌

Update: 2025-06-29 13:43 IST

ಬಿ.ಕೆ.ಹರಿಪ್ರಸಾದ್‌

ಬೆಂಗಳೂರು : ಮೀಸಲಾತಿಗೆ ಬಿಜೆಪಿ ಬಗೆದಿರುವ ದ್ರೋಹ ಹಾಗೂ ಹಿಂದುಳಿದವರಿಗೆ ಮಾಡಿರುವ ಅನ್ಯಾಯ ಇತಿಹಾಸದ ಮೀಸಲಾತಿ ಚರ್ಚೆಯ ಪ್ರತಿ ಪುಟಗಳಲ್ಲೂ, ಪ್ರತಿ ಪದಗಳಲ್ಲೂ ಅಚ್ಚಳಿಯದೇ ಉಳಿದಿರುವ ಸತ್ಯ. ಆದರೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ತಮ್ಮ ಆತ್ಮಸಾಕ್ಷಿಗೂ ವಿರುದ್ಧ ಮಾತಾಡಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಟೀಕಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ಪಕ್ಷ ಅಚಲವಾದ ನಿಲುವು ಹೊಂದಿದೆ.‌ ಆದರೆ ಮೀಸಲಾತಿಯ ಪರಮ ವಿರೋಧಿ ನಿಲುವು ಹೊಂದಿರುವ ಬಿಜೆಪಿ ಪಕ್ಷ ಇತಿಹಾಸ ತಿರುಚಲು ಹೊರಟಿದೆ ಎಂದು ಹೇಳಿದ್ದಾರೆ.

ಮಂಡಲ್ ಆಯೋಗದ ಶಿಫಾರಸ್ಸು ಜಾರಿಯಾಗಬಾರದೆಂದು ಪ್ರಬಲವಾಗಿ ವಿರೋಧ ಮಾಡಿದ್ದೇ ವಿ.ಪಿಸಿಂಗ್ ಸರಕಾರದ ಭಾಗವೇ ಆಗಿದ್ದ ಬಿಜೆಪಿ ಪಕ್ಷ. ಮಂಡಲ್ ಆಯೋಗದ ವಿರುದ್ಧ ಕಮಂಡಲ ಹೋರಾಟ ಶುರು ಮಾಡಿದನ್ನು ಬಿಜೆಪಿ ಮರೆಯಿತೇ? ಮಂಡಲ್ ವರದಿ ತಿರಸ್ಕರಿಸಬೇಕಂದು ದೇಶವ್ಯಾಪಿ ಚಳಿವಳಿ ನಡೆಸಿ, ಮೈಗೆ ಬೆಂಕಿ ಹಚ್ಚಿಕೊಂಡವರು ಯಾರು ಎಂಬುದನ್ನು ಬಿಜೆಪಿ ಮರೆಮಾಚುತ್ತಿದ್ದೆಯೇ?. 1984ರಲ್ಲಿ ಲೋಕಸಭೆಯಲ್ಲಿ ಎರಡೇ ಎರಡು ಸ‍್ಥಾನಗಳನ್ನು ಹೊಂದಿದ್ದ ಬಿಜೆಪಿಯ ಪ್ರಾರಂಭಿಕ ಹಂತದ ರಾಜಕೀಯ ಯಶಸ್ಸಿನ ದೊಡ್ಡ ಪಾಲು ‘ಮಂಡಲ’ ವಿರುದ್ಧದ ‘ಕಮಂಡಲ’ ಚಳವಳಿಯ ಫಲವನ್ನು ಅಲ್ಲಗಳೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ಮೀಸಲಾತಿ ವಿರೋಧಿ ಇತಿಹಾಸವಂತೂ ಮರೆಯಲು ಸಾಧ್ಯವಿಲ್ಲ. ಮೀಸಲಾತಿಯ ವಿರೋಧಿ ಚಳುವಳಿಯಲ್ಲಿ ಬಿಜೆಪಿಯದ್ದೇ ಸಿಂಹಪಾಲಿದೆ. ಮೀಸಲಾತಿಯ ಅವಧಿ ಮೀರಿದೆ, ಮೀಸಲಾತಿಯನ್ನು ಪರಾಮರ್ಶಿಸುವ ಕಾಲ ಬಂದಿದೆ ಎಂದು ಕಳೆದ ಬಿಹಾರದ ಚುನಾವಣೆಯಲ್ಲಿ ಸಂಘಪರಿವಾರದ ಸರ ಸಂಚಾಲಕ ಮೋಹನ್ ಭಾಗವತ್ ನೀಡಿದ ಹೇಳಿಕೆಯನ್ನು ದೇಶದ ಜನ ಮರೆತಿಲ್ಲ. ಅದಕ್ಕೆ ಬಿಹಾರದ ಜನರು ನೀಡಿದ ತಕ್ಕ ಉತ್ತರಕ್ಕೆ ಬಿಜೆಪಿ ಭಾರಿ ಬೆಲೆತೆತ್ತಿದೆ. ಆದ್ದರಿಂದಲೇ ಮೀಸಲಾತಿಯನ್ನು ಬಹಿರಂಗವಾಗಿ ವಿರೋಧಿಸುವ ಮನಸ್ಥಿತಿ ಮಾತ್ರ ಬದಲಾಗಿದೆ ಹೊರತು, ಕಾರ್ಯತಂತ್ರವಲ್ಲ ಎಂದು ಉಲ್ಲೇಖಿಸಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಸಿದ್ದವಾಗಿದ್ದ ಹಿಂದುಳಿದ ವರ್ಗದ ವರದಿಯನ್ನು ಬಿಜೆಪಿ ಮೊದಲಿಗೆ ವಿರೋಧಿಸುತ್ತಾ, ಅಂಕಿ ಸಂಖ್ಯೆಗಳು ಸರಿಯಲ್ಲ, ಅವೈಜ್ಞಾನಿಕವಾಗಿ ಎಂದು ದೂರುತ್ತಾ ಬಂದಿದೆ. ಎಲ್ಲಿಯೂ ಅವೈಜ್ಞಾನಿಕ ವಿಷಯಗಳ ಬಗ್ಗೆ ಚರ್ಚೆಯೂ ನಡೆಸಲಿಲ್ಲ. ಕೊನೆಗೆ ವರದಿ ಒಪ್ಪಿಕೊಂಡರೇ ಹೋರಾಟ ನಡಸುವುದಾಗಿ ಬೆದರಿಕೆ ಒಡ್ಡಿದೆ. ಇದೆಲ್ಲವೂ ಬಿಜೆಪಿಯ ಹಿಂದುಳಿದವರ ಮೀಸಲಾತಿಯ ವಿರೋಧಿ ಹೋರಾಟದ ಕಾರ್ಯತಂತ್ರದ ಭಾಗ. ಬಿಜೆಪಿ ಮೀಸಲಾತಿಯ ಪರ ಮಾತಾಡುವ ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಕೇಂದ್ರದ ಸಚಿವರು ಇತಿಹಾಸಕ್ಕೆ ಅಪಚಾರ ನಡೆಸಿ, ಜನರನ್ನು ಮೂರ್ಖರನ್ನಾಗಿಸಿದರೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News