×
Ad

ಕೆಪಿಸಿಸಿ ಅಧ್ಯಕ್ಷರಾಗಿ ಆರೆಸ್ಸೆಸ್‌ ಗೀತೆ ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಬೇಕು : ಬಿ.ಕೆ.ಹರಿಪ್ರಸಾದ್

Update: 2025-08-25 13:03 IST
ಬಿ.ಕೆ.ಹರಿಪ್ರಸಾದ್‌\ಡಿ.ಕೆ.ಶಿವಕುಮಾರ್‌

ಬೆಂಗಳೂರು, ಆ.25 : ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಆರೆಸ್ಸೆಸ್‍ನ ಪ್ರಾರ್ಥನಾ ಗೀತೆಯನ್ನು ಹಾಡಿದ್ದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಹಾಡಿದ್ದರೆ ಅವರು ಕ್ಷಮೆ ಕೇಳಬೇಕಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಆರೆಸ್ಸೆಸ್ ಪ್ರಾರ್ಥನಾ ಗೀತೆಯನ್ನು ಹಾಡಿರುವ ಕುರಿತು ಸೋಮವಾರ ಹೊಸದಿಲ್ಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಆರೆಸ್ಸೆಸ್ ಅನ್ನು ದೇಶದಲ್ಲಿ ಮೂರು ಬಾರಿ ನಿಷೇಧ ಮಾಡಿದ್ದಾರೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಸಂಘದ ಪ್ರಾರ್ಥನೆ ಮಾಡಿದ್ದರೆ ನಮ್ಮದೇನು ಅಭ್ಯಂತರವಿಲ್ಲ. ಸರಕಾರ ಅಂದರೆ ಒಂದು ಪಕ್ಷದ ಸರಕಾರವಲ್ಲ. ಇಡೀ 7 ಕೋಟಿ ಕರ್ನಾಟಕದ ಜನತೆಯ ಸರಕಾರ. ಅದರಲ್ಲಿ ಆರೆಸ್ಸೆಸ್‍ನವರು ಬರುತ್ತಾರೆ, ಜಮಾಅತೆ ಇಸ್ಲಾಮಿಯವರು ಬರುತ್ತಾರೆ, ಅಲೆಮಾರಿಗಳು ಸೇರಿದಂತೆ ಎಲ್ಲರೂ ಬರುತ್ತಾರೆ ಎಂದು ಹೇಳಿದರು.

ಆದರೆ, ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ಆ ರೀತಿ ಹೇಳುವ ಹಾಗಿಲ್ಲ. ಒಂದು ವೇಳೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆರೆಸ್ಸೆಸ್ ಪ್ರಾರ್ಥನಾ ಗೀತೆ ಹೇಳಿದ್ದರೆ ಕ್ಷಮೆ ಕೇಳಬೇಕಾಗುತ್ತದೆ. ಮಹಾತ್ಮ ಗಾಂಧಿಯನ್ನು ಕೊಂದವರ ಸಂಘದ ಪ್ರಾರ್ಥನೆ ಮಾಡುವುದು ಸರಿಯಲ್ಲ. ಶಿವಕುಮಾರ್ ಅವರಿಗೆ ಹಲವಾರು ಮುಖಗಳಿವೆ. ಅವರೇ ಹೇಳಿರುವಂತೆ ಅವರೊಬ್ಬ ಕೃಷಿಕ, ಕ್ವಾರಿ ಮಾಲಕ, ಶಿಕ್ಷಣ ಕ್ಷೇತ್ರದವನು, ರಾಜಕಾರಣಿ ಎಂದು ಕರೆಸಿಕೊಳ್ಳುತ್ತಾರೆ ಎಂದು ಹರಿಪ್ರಸಾದ್ ಹೇಳಿದರು.

ಬಿಜೆಪಿಯವರು ಧರ್ಮಸ್ಥಳ ಚಲೋ ಹಮ್ಮಿಕೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳದ ವಿಚಾರದಲ್ಲಿ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿಕೆಗಳನ್ನು ನೋಡಿದರೆ ನಿಮಗೆ ಎಲ್ಲವೂ ಅರ್ಥವಾಗುತ್ತದೆ ಎಂದು ತಿಳಿಸಿದರು.

ಸೌಜನ್ಯಾ ಪ್ರಕರಣದಲ್ಲಿ ತನಿಖೆಯಾಗಬೇಕು ಎಂದು ಧರ್ಮಸ್ಥಳದಲ್ಲಿ ಇವರೇ ಭಾಷಣಗಳನ್ನು ಮಾಡಿದ್ದಾರೆ. ಇವತ್ತು ಏಕಾಏಕಿ ಬದಲಾವಣೆಯಾಗಿದ್ದಾರೆ. ಎಸ್‍ಐಟಿ ರಚನೆ ಮಾಡಿ ಎಂದು ಹೇಳಿದ್ದೆ ಬಿಜೆಪಿಯವರು. ಈಗ ಸರಕಾರ ಎಸ್‍ಐಟಿ ರಚನೆ ಮಾಡಿ ತನಿಖೆ ಮಾಡಿಸುತ್ತಿದೆ ಎಂದು ಹರಿಪ್ರಸಾದ್ ಹೇಳಿದರು.

ಧರ್ಮಸ್ಥಳ ದೇವಸ್ಥಾನ ಬಗ್ಗೆ ಜನರಲ್ಲಿ ದೊಡ್ಡ ನಂಬಿಕೆಯಿದೆ. ಆದುದರಿಂದ, ಸರಕಾರ ಎಸ್‍ಐಟಿಗೆ ಕಾಲಮಿತಿ ನಿಗದಿ ಮಾಡಿ, ತ್ವರಿತವಾಗಿ ತನಿಖೆ ಮಾಡಿಸಿ ಸತ್ಯ ಹೊರಗೆ ಬರುವಂತೆ ಮಾಡಬೇಕು. ಎಸ್‍ಐಟಿಯವರು ದೇವಸ್ಥಾನ, ದೇವಸ್ಥಾನದ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವವರ ಬಗ್ಗೆ ತನಿಖೆ ಮಾಡುತ್ತಿಲ್ಲ. ಬದಲಾಗಿ, ಸಮೀರ್ ಎಂ.ಡಿ, ಹಾಗೂ ಮಾಸ್ಕ್ ಮ್ಯಾನ್ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ವ್ಯಕ್ತಿಯ ಹೇಳಿಕೆಗಳ ಆಧಾರದಲ್ಲಿ ತನಿಖೆ ಮಾಡುತ್ತಿದೆ ಎಂದು ಅವರು ತಿಳಿಸಿದರು.

ರಾಮಾಯಣದಲ್ಲಿ ಸೀತಾ ಮಾತೆಯನ್ನೆ ಪರೀಕ್ಷೆಗೆ ಒಳಪಡಿಸಿರಲ್ಲಿಲ್ಲವೇ? ಆದುದರಿಂದ, ಧರ್ಮಸ್ಥಳದ ವಿಚಾರವನ್ನು ಬಿಜೆಪಿಯವರು ರಾಜಕಾರಣಕ್ಕಾಗಿ ಬಳಸಿಕೊಳ್ಳಬಾರದು. ಅನಗತ್ಯವಾಗಿ ದೇವಸ್ಥಾನವನ್ನು ಈ ಪ್ರಕರಣದಲ್ಲಿ ಎಳೆದುತರುವ ಕೆಲಸ ಮಾಡಬಾರದು ಎಂದು ಹರಿಪ್ರಸಾದ್ ಹೇಳಿದರು.

ನಮ್ಮ ರಾಜ್ಯ ಹಲವಾರು ಧರ್ಮ, ಭಾಷೆ, ಪ್ರಾಂತ್ಯಗಳನ್ನು ಒಳಗೊಂಡಿದೆ. ಇಲ್ಲಿ ಧಾರ್ಮಿಕ ರಾಜಕಾರಣ ಮಾಡಲು ಬಿಜೆಪಿಯವರು ಶತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರಿಗೆ ಜಯ ಸಿಗುವುದಿಲ್ಲ. ಇವರಿಗೆ ಧರ್ಮಸ್ಥಳದ ಅಣ್ಣಪ್ಪನೆ ಶಿಕ್ಷೆ ಕೊಡುತ್ತಾನೆ ಎಂಬ ನಂಬಿಕೆಯಿದೆ ಎಂದು ಹರಿಪ್ರಸಾದ್ ತಿಳಿಸಿದರು.

ಎರಡು ಹಿಂದುತ್ವ ಗುಂಪುಗಳ ನಡುವಿನ ಘರ್ಷಣೆ :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಇಬ್ಬರು ಪ್ರಬಲ ಆರೆಸ್ಸೆಸ್ ನಾಯಕರ, ಎರಡು ಹಿಂದುತ್ವ ಗುಂಪುಗಳ ನಡುವಿನ ಘರ್ಷಣೆ ಇದು. ಎರಡು ಪ್ರಮುಖ ನಾಯಕರ ಒಳ ಜಗಳದಲ್ಲಿ ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ. ಅವರು ಯಾರು ಎಂದು ಎಲ್ಲರಿಗೂ ಗೊತ್ತಿದೆ.

ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News