×
Ad

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ | ಅವಕಾಶ ವಂಚಿತರು ಮುನ್ನಲೆಗೆ ಬರುತ್ತಾರೆಂಬ ಆತಂಕದಿಂದ ಅಪಪ್ರಚಾರ : ಬಿ.ಕೆ. ಹರಿಪ್ರಸಾದ್

Update: 2025-09-29 19:50 IST

ಬೆಂಗಳೂರು, ಸೆ. 29: ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಜಾರಿಯಾದರೆ, ಅವಕಾಶ ವಂಚಿತರು, ತುಳಿತಕ್ಕೊಳಗಾದವರು ಮುನ್ನೆಲೆಗೆ ಬರುತ್ತಾರೆಂಬ ಆತಂಕದಿಂದ ಕೆಲವರು ಅಪಪ್ರಚಾರ ಮಾಡಿ ಜನ ಸಾಮಾನ್ಯರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ದೂರಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯ ಸರಕಾರ ಯಾವುದೇ ಜಾತಿ ಜನಗಣತಿ ಮಾಡುತ್ತಿಲ್ಲ. ಬದಲಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಕೇಂದ್ರ ಸಚಿವರು, ಬಿಜೆಪಿಯ ಸಂಸದರು ಸೇರಿದಂತೆ ಆ ಪಕ್ಷದ ನಾಯಕರು ಅನಗತ್ಯ ಟೀಕೆ ಮಾಡುತ್ತಿದ್ದು, ಜನರನ್ನು ಧಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.

ಬಿಜೆಪಿಯ ಮಾತೃಪಕ್ಷ ಆರೆಸೆಸ್ಸ್ ಹಿಂದುಳಿದ ವರ್ಗ, ಶೂದ್ರರು ಮತ್ತು ಪಂಚಮರ ಏಳಿಗೆಗೆ ಎಂದೂ ಶ್ರಮಿಸಿಲ್ಲ. ಶೋಷಿತರನ್ನು ಕಾಲಾಳುಗಳನ್ನಾಗಿ ಬಳಸಿಕೊಂಡಿದೆ. ಅವರಿಗೆ ಸೌಲಭ್ಯಗಳು ಸಿಕ್ಕಿ ಸ್ವಾವಲಂಬಿಗಳಾದರೆ, ಕೋಮುವಾದಿಗಳಿಗೆ ಜಾತಿ-ಧರ್ಮದ ಹೆಸರಿನಲ್ಲಿ ಆಟವಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಸಮೀಕ್ಷೆಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.

ಕರ್ನಾಟಕ ರಾಜ್ಯದಲ್ಲಿ ಮೇಲ್ಜಾತಿ ಎನಿಸಿಕೊಂಡಿರುವವರು ಮೀಸಲಾತಿಯ ವ್ಯಾಪ್ತಿಯಲ್ಲಿ ಬರುತ್ತಿಲ್ಲ. ಅವಕಾಶ ವಂಚಿತ ಸಮುದಾಯಗಳು ಮುನ್ನೆಲೆಗೆ ಬರಬಹುದು ಎಂಬ ಆತಂಕದಿಂದ ಸಮೀಕ್ಷೆಯ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಮೀಕ್ಷೆ ಹಂತದಲ್ಲಿನ ಲೋಪಗಳನ್ನು ಸರಿಪಡಿಸಲು ಈಗಾಗಲೇ ಸರಕಾರ ಕ್ರಮಕೈಗೊಂಡಿದ್ದು, ತೀವ್ರಗತಿಯಲ್ಲಿ ಕಾರ್ಯಾಚರಿಸುತ್ತಿದೆ. ಅ.7ರ ವೇಳೆಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಯಾವ ಸಮುದಾಯವನ್ನಾದರೂ ಮೀಸಲಾತಿ ಪಟ್ಟಿಗೆ ಸೇರಲು ಅವಕಾಶ ಇದೆ. ಆದರೆ ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಕುರುಬ ಸಮುದಾಯವನ್ನು ಸೇರಿಸಲು ಪರಾಮರ್ಶೆ ನಡೆಸಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News