ಗಾಂಧಿಯ ಕೊಂದ ಆರೆಸ್ಸೆಸ್ ಶತಮಾನೋತ್ಸವ ಆಚರಿಸುತ್ತಿರುವುದು ದೇಶದ ದುರಂತ : ಬಿ.ಕೆ.ಹರಿಪ್ರಸಾದ್
ಬೆಂಗಳೂರು, ಅ.2: ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ಆರೆಸ್ಸೆಸ್ ಸಂಘಟನೆ ಇಂದು ತನ್ನ 100 ವರ್ಷದ ಶತಮಾನೋತ್ಸವ ಆಚರಿಸುತ್ತಿದೆ. ಇದು ದೇಶದ ದೊಡ್ಡ ದುರಂತ. ಗಾಂಧಿಯನ್ನು ಕೊಂದ ಆರೆಸ್ಸೆಸ್ ಕಾರ್ಯಕರ್ತ ನಾಥೂರಾಮ್ ಗೋಡ್ಸೆ ಈ ದೇಶದ ಮೊಟ್ಟ ಮೊದಲ ಉಗ್ರವಾದಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಾತ್ಮಾ ಗಾಂಧೀಜಿಯವರ 156ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ವೋದಯ, ಶಾಂತಿ ಮತ್ತು ಸದ್ಭಾವನೆಯ ವಿರುದ್ಧ ಪಾಠ ಮಾಡುವ ಆರೆಸ್ಸೆಸ್ ಸಂಘಟನೆಯು ಶತಮಾನೋತ್ಸವದಂತಹ ಕಾರ್ಯಕ್ರಮ ನಡೆಸುವುದು, ಅದಕ್ಕೆ ಪ್ರಧಾನ ಮಂತ್ರಿಯೇ ಹಾಜರಾಗಿರುವುದು ಸ್ವಾತಂತ್ರ ಭಾರತದ ಇತಿಹಾಸದಲ್ಲಿ ಕರಾಳ ದಿನ ಎಂದರು.
ಇಡೀ ಪ್ರಪಂಚವೇ ಗಾಂಧೀಜಿಯವರ ಜನ್ಮದಿನವನ್ನು ಆಚರಿಸುತ್ತಿದೆ. ವಿಶ್ವಸಂಸ್ಥೆಯೇ ಅಕ್ಟೋಬರ್ 2 ಅನ್ನು ಸತ್ಯ ಮತ್ತು ಅಹಿಂಸೆಯ ದಿನ ಎಂದು ಘೋಷಿಸಿದೆ. ಗಾಂಧೀಜಿ ಸತ್ಯ, ಶಾಂತಿ ಮತ್ತು ಸದ್ಭಾವನೆಯಿಂದ ಬದುಕಿದ ಮಹಾನ್ ವ್ಯಕ್ತಿ. ಇಂದಿನ ರಾಜಕೀಯದಲ್ಲಿ ನಡೆಯುತ್ತಿರುವ ಸುಳ್ಳು ಪ್ರಚಾರಗಳ ನಡುವೆ ಜನರಿಗೆ ಗಾಂಧೀಜಿಯವರ ಸತ್ಯದ ತತ್ವ ಇನ್ನಷ್ಟು ಸ್ಪಷ್ಟವಾಗುತ್ತಿದೆ ಎಂದು ಹರಿಪ್ರಸಾದ್ ಹೇಳಿದರು.
ಗಾಂಧೀಜಿ ಹತ್ಯೆಯಲ್ಲಿ ಆರೆಸ್ಸೆಸ್‍ನ ಪಾತ್ರದ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರು ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸಿದ್ದರು. ಇಂತಹ ಸಂಘಟನೆಯ ಶತಮಾನೋತ್ಸವದಲ್ಲಿ ಪ್ರಧಾನ ಮಂತ್ರಿ ಭಾಗವಹಿಸಿರುವುದು ರಾಷ್ಟ್ರದ ಜನತೆಗೆ ಅವಮಾನ. ಆರೆಸ್ಸೆಸ್ 62 ವರ್ಷಗಳ ಕಾಲ ತನ್ನ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ಇಂತಹ ಸಂಘಟನೆಯೊಂದಿಗೆ ನಿಂತಿರುವುದು ಪ್ರಧಾನ ಮಂತ್ರಿಗೆ ಶೋಭೆ ತರುವ ಕೆಲಸವಲ್ಲ ಎಂದು ಹರಿಪ್ರಸಾದ್ ಟೀಕಿಸಿದರು.
ಸ್ವಾತಂತ್ರ ಹೋರಾಟದ ಸಮಯದಲ್ಲಿ ಆರೆಸ್ಸೆಸ್ ಬ್ರಿಟಿಷರ ಪರ ನಿಂತು ಬೂಟು ಕಾಲು ನೆಕ್ಕುತ್ತಿತ್ತು. ಸಾವರ್ಕರ್ ಅವರು ಬ್ರಿಟಿಷರಿಂದ ಪೆನ್ಷನ್ ಪಡೆದರು. 1942ರ ಕ್ವಿಟ್ ಇಂಡಿಯಾ ಚಳುವಳಿಗೆ ವಿರೋಧ ವ್ಯಕ್ತಪಡಿಸಿದವರು ಇವರೇ. ಇಂತಹ ಸಂಘಟನೆಯ ಪರವಾಗಿ ಸ್ಮಾರಕ ನೋಟು-ಕಾಯಿನ್ ಹೊರಡಿಸುತ್ತಿರುವುದು ಲಕ್ಷಾಂತರ ಸ್ವಾತಂತ್ರ ಹೋರಾಟಗಾರರ ತ್ಯಾಗಕ್ಕೆ ಅವಮಾನ ಎಂದು ಹರಿಪ್ರಸಾದ್ ತೀವ್ರ ಕಿಡಿಕಾರಿದರು.
ಆರೆಸ್ಸೆಸ್ ಸಂಘಟನೆ ಶಸ್ತ್ರಾಸ್ತ್ರಗಳನ್ನು ಹಿಡಿದು ಅನೇಕ ದಂಗೆ, ಕೊಲೆಗಳನ್ನು ಸೃಷ್ಟಿಸಿದೆ. ದೇಶದಲ್ಲಿ ಹಿಂಸೆಯನ್ನು ಬೀಜ ಬಿತ್ತಿದವರ ವಿರುದ್ಧವೇ ಜನರು ಶಸ್ತ್ರಾಸ್ತ್ರ ಹಿಡಿಯಬೇಕಾಗಿದೆ. ಇಂತಹ ಚಟುವಟಿಕೆಗಳ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಹರಿಪ್ರಸಾದ್ ಹರಿಹಾಯ್ದರು.
ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಗಾಂಧೀಜಿ ಆದರ್ಶಗಳನ್ನು ಜನರಿಗೆ ತಲುಪಿಸಬೇಕು. ಸರಳ ಜೀವನ-ಉನ್ನತ ಚಿಂತನೆ, ಸರ್ವಧರ್ಮ ಸಮಭಾವ ಹಾಗೂ ಶಾಂತಿ-ಸದ್ಭಾವನೆ ತತ್ವಗಳನ್ನು ಹೆಚ್ಚು ಪ್ರಚಾರ ಮಾಡಬೇಕು ಎಂದು ಹರಿಪ್ರಸಾದ್ ಕರೆ ನೀಡಿದರು.
ಪ್ರಧಾನಿ ಕ್ಷಮೆಯಾಚಿಸಬೇಕು: ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನತೆಗೆ ಕ್ಷಮೆಯಾಚಿಸಬೇಕು. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ, ದ್ವೇಷ ಮತ್ತು ಭೇದಭಾವ ಸೃಷ್ಟಿಸುವ ಸಂಘಟನೆ ಇದು. ಇಂತಹವರ ಪರವಾಗಿ ನಿಲ್ಲುವುದು ಸಂವಿಧಾನದ ಗೌರವವನ್ನು ಕುಗ್ಗಿಸುವಂತದ್ದು ಎಂದು ಹರಿಪ್ರಸಾದ್ ತೀವ್ರವಾಗಿ ಹೇಳಿದರು.
ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಬಿ.ಕೆ.ಹರಿಪ್ರಸಾದ್
ಸಾಂವಿಧಾನಿಕ ಹುದ್ದೆಯಲ್ಲಿದ್ದೂ, ಸಂವಿಧಾನ ವಿರೋಧಿ ಸಂಘಟನೆಯ ಪ್ರಚಾರ ನಡೆಸುವುದು ಪ್ರಧಾನಿ ಹುದ್ದೆಗೆ ಶೋಭೆಯಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಆರೆಸ್ಸೆಸ್ ಸಂಘಟನೆಯ ಪ್ರಚಾರ ಪ್ರಮುಖ್ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಬಿ.ಕೆ.ಹರಿಪ್ರಸಾದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಆರೆಸ್ಸೆಸ್ ನೂರು ವರ್ಷದ ನೆನಪಿಗೆ ಪ್ರಧಾನ ಮಂತ್ರಿಗಳು ಅಂಚೆ ಚೀಟಿ ಹಾಗೂ ನಾಣ್ಯ ಬಿಡುಗಡೆ ಮಾಡಿರುವುದು ಸಂವಿಧಾನಕ್ಕೆ ಬಗೆದ ದ್ರೋಹ ಹಾಗೂ ಇತಿಹಾಸಕ್ಕೆ ಮಾಡಿದ ಅಪಚಾರ. ಸ್ವತಂತ್ರ ಚಳುವಳಿಯ ವಿರೋಧಿಯಾಗಿದ್ದ ಆರೆಸ್ಸೆಸ್ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ನೂರು ವರ್ಷದಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದಿದ್ದಾರೆ.
ದೇಶದ ಸೌಹಾರ್ದತೆ, ಐಕ್ಯತೆ, ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಆಶಯಗಳಿಗೆ ಸಂಘಪರಿವಾರ ಮಾಡಿರುವ ಗಾಯಗಳಿಗೆ ಲೆಕ್ಕವಿಲ್ಲ. ಭಾರತದ ಸಂವಿಧಾನದ ಬದಲು ಮನುಸ್ಮೃತಿಯನ್ನು ಜಾರಿ ಮಾಡಲು ಹೊರಟಿರುವ ಮನುವಾದಿ ಸಂಘಟನೆಯನ್ನು ಪ್ರಧಾನಿ ಹುದ್ದೆಯಲ್ಲಿದ್ದು ಪ್ರಚಾರ ನಡೆಸುವುದು ಅಕ್ಷಮ್ಯ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.
ಕೋಮುದ್ವೇಷ, ಕೊಲೆ, ಪಿತೂರಿ, ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತಿರುವ ಸಂಘಟನೆಯ ಶತಮಾನೋತ್ಸದಲ್ಲಿ ಅಂಚೆ ಹಾಗೂ ನಾಣ್ಯ ಬಿಡುಗಡೆ ಮಾಡಿದ್ದು ಯಾವ ಪುರುಷರ್ಥಕ್ಕಾಗಿ? 1963ರಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿರುವ ಸಂಘದ ಚಿತ್ರವನ್ನು ಅಂಚೆಯಲ್ಲಿ ಹಾಕಿರುವುದು ಇತಿಹಾಸದ ವ್ಯಂಗ್ಯ, ಸಂಘ ಸುಳ್ಳನ್ನೇ ಸತ್ಯವನ್ನಾಗಿಸುವ ವ್ಯರ್ಥ ಪ್ರಯತ್ನವಷ್ಟೇ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
ನಾಣ್ಯದಲ್ಲಿ ಆರೆಸ್ಸೆಸ್ ಪ್ರತಿಪಾದಿಸುವ ಭಾಗವ ಧ್ವಜವನ್ನು ಸೇರಿಸುವ ಮೂಲಕ ಸಂವಿಧಾನದ ಧರ್ಮನಿರಪೇಕ್ಷ ಸಿದ್ಧಾಂತವನ್ನು ಅವಮಾನಿಸಿದೆ. ಇಂತಹ ಕೃತ್ಯಗಳನ್ನ ಬಲವಾಗಿ ಖಂಡಿಸಿ, ಸಂವಿಧಾನ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕಬೇಕಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.