ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸಬೇಕು : ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್
ಬೆಂಗಳೂರು : ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದೇಶದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದು, ಆ ಸಂಘಟನೆಯನ್ನು ನಿಷೇಧಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಶನಿವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ದಾರ್ ಪಟೇಲ್ ಅವರು ಆರೆಸ್ಸೆಸ್ ನಿಷೇಧ ಮಾಡಬೇಕೆಂದು ಪ್ರತಿಪಾದಿಸಿದ್ದರು. ನಮ್ಮ ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಬಳಿಕವೂ ಅದನ್ನು ಆರೆಸ್ಸೆಸ್ ತಿರಸ್ಕರಿಸಿದೆ. ಹೀಗಾಗಿ ಅದೊಂದು ಕೋಮುವಾದಿ ಸಂಘಟನೆ ಎಂದು ಟೀಕಿಸಿದರು.
ಆರೆಸ್ಸೆಸ್ ದೇಶದಲ್ಲಿ ದ್ವೇಷ ಭಾವನೆ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದೆ. ಹೀಗಾಗಿಯೇ ರಾಷ್ಟ್ರಪಿತ ಮಹಾತ್ಮ ಗಾಂಧಿ ಕೊಲೆ ನಡೆದಿದೆ ಎಂದು ಪಟೇಲರು ಹೇಳಿದ್ದರು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ನಿವಾಸಕ್ಕೆ ಘೇರಾವ್ ಮಾಡಲಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಆರೆಸ್ಸೆಸ್ ನಿಷೇಧ ಮಾಡಲಾಗಿತ್ತು ಎಂದು ಅವರು ಉಲ್ಲೇಖಿಸಿದರು.
ಆರೆಸ್ಸೆಸ್ ಒಪ್ಪಿಕೊಂಡವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಜಾಗವಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ದ್ವಂದ್ವ ನೀತಿ ಅನುಸರಿಸುವುದಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ, ಸಾರ್ವಜನಿಕ ಸ್ಥಳಗಳಲ್ಲಿ ಏನೇ ಚಟುವಟಿಕೆಗಳನ್ನು ನಡೆಸಿದರೂ ಅನುಮತಿ ಪಡೆದುಕೊಳ್ಳಬೇಕೆಂದು ಹೇಳಿದ್ದಾರೆ. ಕರ್ನಾಟಕ ರಾಜ್ಯದ ಹಲವು ಕಡೆಗಳಲ್ಲಿ ಕೋಮುಭಾವನೆ ಕೆರಳಿಸುವ ಕೆಲಸವನ್ನು ಆರೆಸ್ಸೆಸ್ ಮಾಡಿದೆ ಎಂದು ಹರಿಪ್ರಸಾದ್ ದೂರಿದರು.