ʼಸುಳ್ಳು ಇತಿಹಾಸವನ್ನು ಸೃಷ್ಟಿಸುವುದು, ಇತಿಹಾಸವನ್ನೇ ತಿರುಚುವುದು ಬಿಜೆಪಿಯವರ ಹುಟ್ಟು ಗುಣʼ : ರಾಷ್ಟ್ರಗೀತೆ ಬಗ್ಗೆ ಕಾಗೇರಿ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ಆಕ್ರೋಶ
ಬಿ.ಕೆ.ಹರಿಪ್ರಸಾದ್/ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು : ಇತಿಹಾಸವನ್ನು ಕೆದಕಲು ಹೋಗುವುದಿಲ್ಲ ಎನ್ನುತ್ತಲೇ ಇತಿಹಾಸವನ್ನು ತಿರುಚಲು ಹೋಗಿ ನಿಮ್ಮ ಪೂರ್ವಜರ ಬಂಡವಾಳವನ್ನು ಬಯಲು ಮಾಡಿಕೊಂಡಿದ್ದೀರಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ. ಸುಳ್ಳು ಇತಿಹಾಸವನ್ನು ಸೃಷ್ಟಿಸುವುದು, ಇತಿಹಾಸವನ್ನೇ ತಿರುಚುವುದು ಬಿಜೆಪಿಯವರ ಹುಟ್ಟು ಗುಣ. ನಿಮ್ಮ ಇತಿಹಾಸವನ್ನು ಕೆದಕುವುದು ಮಾತ್ರವಲ್ಲ ದಾಖಲೆ ಸಮೇತ ಬಿಚ್ಚಿಡುವುದಕ್ಕೆ ನಾನು ಸಿದ್ದವಿದ್ದೇನೆ, ಬಹಿರಂಗ ಚರ್ಚೆಗೆ ನೀವು ಸಿದ್ದರಿದ್ದೀರಾ? ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಂಸದ ಕಾಗೇರಿ ವಿಡಿಯೋ ಹಂಚಿಕೊಂಡಿರುವ ಹರಿಪ್ರಸಾದ್ ಅವರು, ಬ್ರಿಟಿಷರ ಗುಲಾಮಗಿರಿ ಮಾಡುತ್ತಲೇ, ಕ್ಷಮಾಪಣೆ ಪತ್ರ ಬರೆದು ಸಂಭಾವನೆ ಪಡೆದವರು ನಿಮ್ಮ ಪೂರ್ವಜ ಸಾವರ್ಕರ್ ಇತಿಹಾಸದ ಬಗ್ಗೆ ಮಾತಾಡೋಣವೇ? ಕ್ವಿಟ್ ಇಂಡಿಯಾ ಚಳುವಳಿಗೆ ನಮ್ಮ ಬೆಂಬಲವಿಲ್ಲ ಎಂದು ಬ್ರಿಟಿಷರಿಗೆ ಪತ್ರ ಬರೆದ ನಿಮ್ಮ ಪೂರ್ವಜ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಇತಿಹಾಸದ ಬಗ್ಗೆ ಮಾತಾಡೋಣವೇ? ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನು ಅವಮಾನಿಸುವ ನಿಮ್ಮ ರಾಷ್ಟ್ರ ವಿರೋಧಿ ದೋರಣೆ ನಿನ್ನೆ ಮೊನ್ನೆಯದ್ದಲ್ಲ, ಸ್ವತಂತ್ರ ಚಳುವಳಿಯ ಇತಿಹಾಸದ ಪ್ರತಿ ಪುಟದಲ್ಲಿ ನಿಮ್ಮ ಪೂರ್ವಜರ ವಿರೋಧಿತನದ ದಾಖಲೆಗಳಿವೆ. ನೀವು ರಾಷ್ಟ್ರಗೀತೆಯನ್ನು ಅವಮಾನಿಸಿರುವುದು ಅದರ ಮುಂದುವರೆದ ಭಾಗ ಅಷ್ಟೇ ಎಂದು ಆಕ್ರೋಶ ಹೊರಹಾಕಿದ್ದಾರೆ.
ಭಾರತದ ಏಕತೆ, ರಾಷ್ಟ್ರೀಯತೆಯ ಸಂಕೇತವಾಗಿ ರಚಿಸಲಾದ ರಾಷ್ಟ್ರಗೀತೆ ಪ್ರತಿಯೊಬ್ಬ ಭಾರತೀಯರ ಹೆಮ್ಮೆ. 1911ರಲ್ಲಿ ರವೀಂದ್ರನಾಥ್ ಟ್ಯಾಗೂರರು ಬರೆದ "ಜನಗಣಮನ” ಸಾಲುಗಳಲ್ಲಿ ಸ್ವಾಭಿಮಾನ, ಸಾಂಸ್ಕೃತಿಕ ಐಕ್ಯತೆ, ಸಮಾನತೆ,ಹಾಗೂ ಒಕ್ಕೂಟ ವ್ಯವಸ್ಥೆಯ ಅಂಶಗಳಿವೆ ಹೊರತು ಬ್ರಿಟಿಷರಿಗೆ ಸ್ವಾಗತವಲ್ಲ. 1911 ರ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿಯೂ ಜನಗಣಮನವನ್ನು ಹಾಡಲಾಯಿತು. ಸ್ವತಃ ಟ್ಯಾಗೂರ್ ಅವರೇ 1937 ಹಾಗೂ 1939ರಲ್ಲಿ " ಜನಗಣಮನವೂ ಸ್ವತಂತ್ರ ಭಾರತ ಪ್ರೇರಣೆಗಾಗಿ ಬರೆದಿದ್ದೇನೆ ಹೊರತು ಬ್ರಿಟಿಷರ ಸ್ವಾಗತಕ್ಕಾಗಿ ಅಲ್ಲ ಎಂದು ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ. ಸ್ವತಂತ್ರ ಭಾರತದ ನಂತರ 1950ರಲ್ಲಿ ಅಧಿಕೃತವಾಗಿ ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಳ್ಳಲಾಯಿತು. ಇತಿಹಾಸ ತಿರುಚುವ ಸಂಘಪರಿವಾರಕ್ಕೆ ನೈಜ ಇತಿಹಾಸ ಅರಗಿಸಿಕೊಳ್ಳುವುದು ಕಷ್ಟ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರಧ್ವಜಕ್ಕೆ ಸಮಾನವಾಗಿ ಭಾಗವಧ್ವಜವನ್ನು, ರಾಷ್ಟ್ರಗೀತೆಯ ಸಮಾನವಾಗಿ ವಂದೇ ಮಾತರಂ ಹಾಡನ್ನು ಸಮೀಕರಿಸುವುದೇ ರಾಷ್ಟ್ರದ್ರೋಹಿತನ. ಅಷ್ಟಕ್ಕೂ ವಂದೇ ಮಾತರಂ ಹಾಡಿನ ಬಗ್ಗೆ ನೈಜ ಪ್ರೀತಿ ಇದ್ದರೆ ಆರೆಸ್ಸೆಸ್‌ನ ಅಧಿಕೃತ "ನಮಸ್ತೆ ಸದಾ ವತ್ಸಲೆ" ಹಾಡನ್ನ ರದ್ದು ಮಾಡಿ ವಂದೇ ಮಾತರಂ ಹಾಡನ್ನು ಯಾಕೆ ಹಾಡುತ್ತಿಲ್ಲ? ಶಾಖೆಗಳಲ್ಲಿ ಯಾಕೆ "ವಂದೇ ಮಾತರಂ" ಹಾಡು ಕಡ್ಡಾಯವಲ್ಲ? ನಿಮ್ಮ ಈ ಡೋಂಗಿ ರಾಷ್ಟ್ರಭಕ್ತಿಯನ್ನು ದೇಶದ ಜನರ ಹೇರಬೇಡಿ ಎಂದು ಹೇಳಿದ್ದಾರೆ.
ಇತಿಹಾಸವನ್ನು ಕೆದಕಲು ಹೋಗುವುದಿಲ್ಲ ಎನ್ನುತ್ತಲೇ ಇತಿಹಾಸವನ್ನು ತಿರುಚಲು ಹೋಗಿ ನಿಮ್ಮ ಪೂರ್ವಜರ ಬಂಡವಾಳವನ್ನು ಬಯಲು ಮಾಡಿಕೊಂಡಿದ್ದೀರಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ. ಸುಳ್ಳು ಇತಿಹಾಸವನ್ನು ಸೃಷ್ಟಿಸುವುದು, ಇತಿಹಾಸವನ್ನೇ ತಿರುಚುವುದು ಬಿಜೆಪಿಯವರ ಹುಟ್ಟು ಗುಣ. ನಿಮ್ಮ ಇತಿಹಾಸವನ್ನು ಕೆದಕುವುದು ಮಾತ್ರವಲ್ಲ ದಾಖಲೆ ಸಮೇತ… pic.twitter.com/XPqLbh49A0
— Hariprasad.B.K. (@HariprasadBK2) November 6, 2025