×
Ad

ದೇಶ ನಡೆಯುತ್ತಿರುವುದು ಸಂವಿಧಾನದ ಮೇಲೆ; ಮನುಸ್ಮೃತಿಯ ಮೇಲಲ್ಲ : ಬಿ.ಕೆ.ಹರಿಪ್ರಸಾದ್

"ನೋಂದಣಿ ಇಲ್ಲದ ಆರೆಸ್ಸೆಸ್ ಸಂಘಟನೆಯ ನಾಯಕರು ಹೇಳಿದ ತಕ್ಷಣ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ"

Update: 2025-11-09 18:35 IST

ಬಿ.ಕೆ.ಹರಿಪ್ರಸಾದ್

ಬೆಂಗಳೂರು : ‘ಭಾರತ ಹಿಂದೂ ರಾಷ್ಟ್ರವೋ, ಜಾತ್ಯತೀತ ರಾಷ್ಟ್ರವೋ ಎನ್ನುವುದು ದೇಶದ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ನೋಂದಣಿ ಇಲ್ಲದ ಆರೆಸ್ಸೆಸ್ ಸಂಘಟನೆಯ ನಾಯಕರು ಹೇಳಿದ ತಕ್ಷಣ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ದೇಶ ನಡೆಯುತ್ತಿರುವುದು ಸಂವಿಧಾನದ ತಳಹದಿಯ ಮೇಲೆಯೇ ಹೊರತು ಮನುಸ್ಮೃತಿಯ ಪ್ರತಿಪಾದನೆಯ ಮೇಲಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಇಂದಿಲ್ಲಿ ಪ್ರತಿಪಾದಿಸಿದ್ದಾರೆ.

ರವಿವಾರ ಸಾಮಾಜಿಕ ಜಾಲತಾಣ ಎಕ್ಸ್‌ ಪೋಸ್ಟ್ ಹಾಕಿರುವ ಅವರು, ‘ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳಾದರೇ ಇದೇ ನೆಲದಲ್ಲಿ ವಾಸಿಸುತ್ತಿರುವ ಮುಸ್ಲಿಮ್, ಕ್ರಿಶ್ಚಿಯನ್, ಜೈನ, ಬೌದ್ಧ, ಪಾರ್ಸಿ ಧರ್ಮಗಳನ್ನ ಹಿಂದೂಗಳೆಂದು ಪರಿಗಣಿಸುತ್ತಾರಾ? ಎಂದು ಸ್ಪಷ್ಟಪಡಿಸಲಿ. ಹಿಂದೂ ರಾಷ್ಟ್ರದ ಕಲ್ಪನೆಯೇ ಸ್ವತಃ ಆರೆಸ್ಸೆಸ್‍ಗೆ ಗೊಂದಲ ಇರುವಾಗ ದೇಶವನ್ನು ಹಿಂದೂ ರಾಷ್ಟ್ರವೆಂದು ದಾರಿ ತಪ್ಪಿಸುತ್ತಿರುವುದು ಯಾಕೆ?’ ಎಂದು ಪ್ರಶ್ನಿಸಿದ್ದಾರೆ.

‘ಬ್ರಿಟಿಷರ ಪರವಾಗಿದ್ದವರು ಬ್ರಿಟಿಷರ ಕಾಲದಲ್ಲಿ ನೋಂದಣಿಯಾಗದೆ ಇರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಆದರೆ, ಸಂವಿಧಾನದಡಿಯಲ್ಲಿ ಕಾನೂನಿಗೆ ಗೌರವ ಕೊಟ್ಟು ನೋಂದಣಿ ಮಾಡಿಕೊಳ್ಳದೆ ಕಾನೂನನ್ನೇ ಧಿಕ್ಕರಿಸುತ್ತಿರುವುದು ಯಾಕೆ ಎನ್ನುವುದನ್ನು ದೇಶದ ಜನರಿಗೆ ಉತ್ತರಿಸಲಿ’ ಎಂದು ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

‘ರಾಜಕೀಯವನ್ನು ನಿಯಂತ್ರಿಸುವುದಿಲ್ಲ’ ಎನ್ನುವುದು ಮೋಹನ್ ಭಾಗವತ್‍ರ ಹಸಿ ಹಸಿ ಸುಳ್ಳಿಗೆ ನಿದರ್ಶನ. ರಾಜಕೀಯ ನಿಯಂತ್ರಣ ಇಲ್ಲ ಎಂದಾದರೆ ಬಿಜೆಪಿಯನ್ನು ನಿಯಂತ್ರಿಸುತ್ತಿರುವುದು ಯಾರು?. ಯಾರ ಬಾಲಗೋಂಚಿಯಂತೆ ಬಿಜೆಪಿ ವರ್ತಿಸುತ್ತಿರುವುದು ಜಗತ್ತಿಗೇ ಗೊತ್ತಿರುವ ಸತ್ಯವಲ್ಲವೇ? ಆರೆಸ್ಸೆಸ್ ಮುಖ್ಯಸ್ಥರೇ ಸುಳ್ಳುಗಳನ್ನು ಹೆಣಿಯುವಾಗ, ಸಂಘ ಪರಿವಾರ ಸುಳ್ಳನ್ನು ಹೇಳದೆ ಇರಲು ಸಾಧ್ಯವೇ?’ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News