ಶಾಲಾ-ಕಾಲೇಜುಗಳಲ್ಲಿ ಹರಡುತ್ತಿರುವ ದ್ವೇಷವನ್ನು ಹತ್ತಿಕ್ಕಲು ಶಿಕ್ಷಕರು ಮುಂದಾಗಬೇಕು : ಬಿ.ಕೆ.ಹರಿಪ್ರಸಾದ್
ಬೆಂಗಳೂರು : ‘ಶಾಲಾ-ಕಾಲೇಜುಗಳಲ್ಲಿ ಧರ್ಮ, ಜಾತಿಯ ಹೆಸರಲ್ಲಿ ಹರಡುತ್ತಿರುವ ದ್ವೇಷವನ್ನು ಹತ್ತಿಕ್ಕಲು ಶಿಕ್ಷಕರು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆಯುಬೇಕು. ಭಾರತ ಎಂದರೆ ಬಹುತ್ವದ ಆತ್ಮ, ಸಂವಿಧಾನದಲ್ಲೂ ಬಹುತ್ವದ ಆತ್ಮ ಇದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಭಾಷೆ, ಧರ್ಮ ಇವೆಲ್ಲವನ್ನೂ ಮೀರಿ ಶಿಕ್ಷಕರು ಮಕ್ಕಳ ಒಳ್ಳೆಯ ಭವಿಷ್ಯಕಾಗಿ ಕೆಲಸ ಮಾಡಿದರೆ ಮಾತ್ರ ನಮ್ಮ ದೇಶ ಅಷ್ಟೇ ಅಲ್ಲ, ಈ ಪ್ರಪಂಚ ಹಾಗೂ ಸಮಾಜವು ಉದ್ಧಾರ ಆಗುತ್ತದೆ ಎಂದು ಹೇಳಿದರು.
ಸಾಕ್ಷರತೆಗೂ, ವಿದ್ಯಾವಂತರಿಗೂ ಬಹಳ ವ್ಯತ್ಯಾಸ ಇದೆ. ವಿದ್ಯಾವಂತರಾಗಬೇಕಾದರೆ ಸಾಕ್ಷರತೆ ಇರಲೇಬೇಕು ಅಂತೇನಿಲ್ಲ. ಈಗ ಸಾಕ್ಷರತೆ ಅನ್ನೋದು ಏನಾಗಿದೆ ಎಂದರೆ ಕೆಲವರು ಪದವಿ ಓದಿರುತ್ತಾರೆ. ಅವರನ್ನು ನೋಡಿದರೆ ಅಂಧ ಭಕ್ತರಾಗಿರುತ್ತಾರೆ. ಅವರಿಗೆ ನೀವು ಶಿಕ್ಷಿತರು ಅಂತ ಹೇಳಕ್ಕಾಗಲ್ಲ, ಅಶಿಕ್ಷಿತರು ಅಂತ ಹೇಳಬೇಕು ಎಂದು ಹರಿಪ್ರಸಾದ್ ಟೀಕಿಸಿದರು.
ಜವಾಹರ್ ಲಾಲ್ ನೆಹರು ಕೇಂಬ್ರಿಡ್ಜ್, ಆಕ್ಸ್ ಫರ್ಡ್ ನಂತಹ ಪ್ರತಿಷ್ಠಿತ ವಿವಿಯಲ್ಲಿ ವಿದ್ಯಾಭ್ಯಾಸ ಮಾಡಿದರು, ಮೌಲಾನಾ ಅಬುಲ್ ಕಲಾಂ ಆಝಾದ್, ಸರ್ವಪಲ್ಲಿ ರಾಧಾಕೃಷ್ಣನ್, ನಮ್ಮ ಬಳ್ಳಾರಿಯ ಕೆ.ಆರ್.ವಿ.ರಾವ್ ಶಿಕ್ಷಣ ಸಚಿವರಾಗಿದ್ದರು. ಈಗ ನಾಲ್ಕನೆ ತರಗತಿ ಪಾಸ್ ಮಾಡದೆ ಇರೋನು ‘ಪರೀಕ್ಷಾ ಪೆ ಚರ್ಚಾ’ ಅಂತ ಭಾಷಣ ಮಾಡುತ್ತಾನೆ. ನಕಲಿ ಪ್ರಮಾಣಪತ್ರ ತೋರಿಸಿ ನಾನು ಪದವೀಧರ ಎಂದು ಹೇಳುತ್ತಾನೆ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.
ಪ್ರಧಾನಮಂತ್ರಿಗೆ ಟೆಲಿಪ್ರಾಂಪ್ಟರ್ ಇಲ್ಲದೆ ಭಾಷಣ ಮಾಡಲು ಆಗೋದಿಲ್ಲ. ಸ್ಮತಿ ಇರಾನಿ ಎಸೆಸೆಲ್ಸಿ ಪಾಸ್ ಮಾಡಿಲ್ಲ, ಇಂತಹವರನ್ನು ದೇಶದ ಶಿಕ್ಷಣ ಸಚಿವರನ್ನಾಗಿ ಮಾಡಿದರೆ, ಶಿಕ್ಷಣ ವ್ಯವಸ್ಥೆ ಏನಾಗಬೇಕು ಎಂದು ಯೋಚನೆ ಮಾಡಿ ಎಂದು ಹರಿಪ್ರಸಾದ್ ಹೇಳಿದರು.
‘ಶಿಕ್ಷಕರ ದಿನಾಚರಣೆಯಂದೆ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಾಗಿದ್ದು, ಇದನ್ನು ನೆನಪಿಸಿಕೊಂಡಾಗಲೆಲ್ಲ ಬಹಳ ದುಃಖವಾಗುತ್ತದೆ. ಆಕೆ ನಮ್ಮ ಮೇಷ್ಟ್ರು ಮಗಳು. ನಮ್ಮ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಎಂಬ ಕಾಳಜಿಯಿಂದ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಸರ್ವ ಜನಾಂಗಗಳ ಪರವಾಗಿ ಹೋರಾಟ ಮಾಡಿದ್ದಕ್ಕಾಗಿ ಆಕೆಯ ಕೊಲೆಯಾಯಿತು’
-ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ