ಅ.10 ರಿಂದ 20ರವರೆಗೆ ಪ್ರತಿ ಬ್ಲಾಕ್‍ನಲ್ಲಿ ‘ಮತ ಉಳಿಸಿ ದೇಶ ಉಳಿಸಿ’ ಪಾದಯಾತ್ರೆ : ಬಿ.ಕೆ.ಹರಿಪ್ರಸಾದ್
ಬೆಂಗಳೂರು : ಮತಕಳ್ಳತನ ಆಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಹೋರಾಟದ ಭಾಗವಾಗಿ ಅ.10ರಿಂದ ಅ.20ರವರೆಗೆ ಪ್ರತಿ ಬ್ಲಾಕ್‍ನಲ್ಲಿ ‘ಮತ ಉಳಿಸಿ ದೇಶ ಉಳಿಸಿ’ ಎಂಬ ಪಾದಯಾತ್ರೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಮೇಲಿನ ದಿಲ್ಲಿ ಪೊಲೀಸರ ದಬ್ಬಾಳಿಕೆ ಖಂಡಿಸಿ ಗುರುವಾರ ನಗರದ ಕೆಪಿಸಿಸಿ ಕಚೇರಿ ಎದುರು ‘ಪ್ರಜಾಪ್ರಭುತ್ವದ ಕರಾಳ ದಿನ' ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅಥವಾ ಗಾಂಧೀಜಿ ಅವರ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಸಾಗುವುದು. ಈ ಪಾದಯಾತ್ರೆ 5 ಕಿ.ಮೀ.ಗಿಂತ ಹೆಚ್ಚು ಇರುವುದಿಲ್ಲ. ಬ್ಲಾಕ್‍ನ ಹಿರಿಯ ನಾಯಕರು ಭಾಗವಹಿಸಲಿದ್ದು, ಜಿಲ್ಲಾಧಿಕಾರಿ ಭೇಟಿ ಬಳಿಕ ರಾಷ್ಟ್ರಗೀತೆ ಹಾಡುವುದು ಹಾಗೂ ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹನ ಮಾಡಲಾಗುವುದು ಎಂದರು.
ದಸರಾ ಸಂದರ್ಭದಲ್ಲಿ ಮತಗಳ್ಳತನದಿಂದ ಆಗುತ್ತಿರುವ ಅನಾಹುತದ ಬಗ್ಗೆ ಜನರಲ್ಲಿ ಜಾಗೃತಿ ಮಾಡಲಾಗುವುದು. ನಂತರ ಅ.25ರಿಂದ ನ.25ರವರೆಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕ ಸಭೆ ಹಾಗೂ ಮಾಧ್ಯಮಗೋಷ್ಠಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ರಾಜ್ಯದ ನಾಯಕರು ಆವರವರ ಜಿಲ್ಲೆಗಳ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಬ್ಲಾಕ್ ಅಧ್ಯಕ್ಷರು ಹಾಗೂ ಬಿಎಲ್‍ಎಗಳಿಗೆ ಈ ಅಕ್ರಮದಿಂದ ಆಗುವ ಅನಾಹುತ ತಡೆಗಟ್ಟಲು ಮಾರ್ಗದರ್ಶನ ನೀಡಲಾಗುವುದು. ಇನ್ನು ಫಾರಂ-7 ಹಾಗೂ ಇತರ ಮೂಲಕ ಯಾರ ಹೆಸರನ್ನು ಮತಪಟ್ಟಿಯಿಂದ ಬಿಡಲಾಗಿದೆ ಅವರನ್ನು ಸೇರಿಸಿ ಸಭೆ ಮಾಡಲಾಗುವುದು ಎಂದು ಹರಿಪ್ರಸಾದ್ ಹೇಳಿದರು.
ಎಎಸ್‍ಡಿಡಿಒ ಮೂಲಕ ಹೆಸರು ಕೈಬಿಟ್ಟಿರುವವರಿಗೆ ಪಂಚಾಯಿತಿ ಮಟ್ಟದಲ್ಲಿ ಸಮೀಕ್ಷೆ ಮಾಡಿ ಪರಿಶೀಲನೆ ಮಾಡಲಾಗುವುದು. ನ.1ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ಈ ಹೋರಾಟ ಜ್ಞಾನೇಶ್ ಕುಮಾರ್ ರಾಜೀನಾಮೆ ಹಾಗೂ ಮೋದಿ ಹಾಗೂ ಅಮಿತ್ ಶಾ ಸೇರಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಈ ಹೋರಾಟ ಮುಂದುವರಿಸುತ್ತೇವೆ ಎಂದು ಹರಿಪ್ರಸಾದ್ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸರಕಾರ ಹಾಗೂ ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಪ್ರತಿಭಟನೆ ಮಾಡುವ ಸಂಪೂರ್ಣ ಅಧಿಕಾರವಿದೆ. ರಾಹುಲ್ ಗಾಂಧಿ ದೇಶದ ಧ್ವನಿಯಾಗಿ ಪ್ರತಿಭಟನೆ ಮಾಡುವಾಗ ದಿಲ್ಲಿ ಪೊಲೀಸರಿಂದ ಅವರ ಮೇಲೆ ಆಗಿರುವ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಚುನಾವಣಾ ಆಯೋಗ ನಡೆದುಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ ಎಂದು ಹರಿಪ್ರಸಾದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.