ಗ್ಯಾರಂಟಿ ಅನುಷ್ಠಾನ ಸಮಿತಿಯ ಡ್ಯಾಶ್‍ಬೋರ್ಡ್-ಸಾಮಾಜಿಕ ಜಾಲತಾಣಗಳಿಗೆ ಚಾಲನೆ
ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚಿಸಿ, ಫಲಾನುಭವಿಗಳ ಜೊತೆ ಸಂಪರ್ಕ ಬೆಳೆಸಿ : ಸಿಎಂ ಸೂಚನೆ
ಬೆಂಗಳೂರು : ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಪಂಚಾಯಿತಿ ಮಟ್ಟದಲ್ಲಿಯೂ ರಚಿಸಲಾಗುತ್ತಿದ್ದು, ಈ ಸಮಿತಿಗಳ ಸದಸ್ಯರು ಫಲಾನುಭವಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರಿಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದರು.
ಬುಧವಾರ ಗೃಹ ಕಚೇರಿ ಕೃಷ್ಣಾ ದಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಡ್ಯಾಶ್‍ಬೋರ್ಡ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಾಲಕ್ಕೆ ಮಾಹಿತಿಗಳು, ಫಲಾನುಭವಿಗಳ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಈ ಯೋಜನೆಗಳ ಕುರಿತ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರು ಪ್ರತಿ ಫಲಾನುಭವಿಯ ಮನೆಗೆ ಭೇಟಿ ನೀಡಿ, ‘ಗ್ಯಾರಂಟಿ ಮನೆ’ ಸ್ಟಿಕರ್ ಹಾಕಬೇಕು. ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಯ ಮೂಲಕ ಸರಕಾರ ನೀಡುವ ಅನುಕೂಲಗಳನ್ನು ಮನವರಿಕೆ ಮಾಡಿ. ಸಾಮಾಜಿಕ ಜಾಲತಾಣಗಳನ್ನು ಎಲ್ಲ ಹಂತಗಳಲ್ಲಿ ಪರಿಣಾಮಕಾರಿಯಾಗಿ ಬಳಸಿ ಎಂದು ಮುಖ್ಯಮಂತ್ರಿ ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಡ್ಯಾಶ್ ಬೋರ್ಡ್ https://gsdashboard.karnataka.gov.in/ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸರಕಾರ ಮಾಡಿರುವ ವೆಚ್ಚದ ಬಗ್ಗೆ ಜಿಲ್ಲಾವಾರು ಹಾಗೂ ತಾಲ್ಲೂಕುವಾರು ಮಾಹಿತಿ ಲಭ್ಯವಿದೆ. ಇದರೊಂದಿಗೆ ಗ್ಯಾರಂಟಿ ಯೋಜನೆಗಳ ಕುರಿತ ಸರಕಾರಿ ಆದೇಶಗಳು, ಅಧಿಕಾರಿಗಳ ಸಂಪರ್ಕ ಮಾಹಿತಿ ಮೊದಲಾದವುಗಳು ಲಭ್ಯವಿದೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದರು.
ಅಲ್ಲದೆ, ಯಶೋಗಾಥೆಗಳ ಭಂಡಾರವೂ ಲಭ್ಯವಿದೆ. ಗ್ಯಾರಂಟಿ ಅನುಷ್ಠಾ ನ ಸಮಿತಿ ಸದಸ್ಯರು ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಅಭಿಪ್ರಾಯ ಹಂಚಿಕೊಳ್ಳುವ ಗ್ಯಾರಂಟಿ ಕಟ್ಟೆ ಎಂಬ ವೇದಿಕೆಯನ್ನೂ ಸೃಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪಿ.ಟಿ.ಪರಮೇಶ್ವರ ನಾಯ್ಕ್, ದಿನೇಶ್ ಗೂಳಿಗೌಡ, ಎಸ್.ಆರ್.ಮೆಹ್ರೋಝ್ ಖಾನ್, ಜಿಬಿಎ ವ್ಯಾಪ್ತಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಕೃಷ್ಣಪ್ಪ, ಮುಖ್ಯಮಂತ್ರಿಯ ಸಂವಹನ ಸಲಹೆಗಾರ ದೀಪಕ್ ತಿಮ್ಮಯ, ಇ-ಆಡಳಿತ ಕೇಂದ್ರದ ಸಿಇಒ ಭೂ ಬಾಲನ್ ಮತ್ತಿತರರು ಉಪಸ್ಥಿತರಿದ್ದರು.